
ಮೆಲ್ಬರ್ನ್ : ಕಳೆದ ವರ್ಷ ಸಿಡ್ನಿಯಲ್ಲಿ ಕರ್ನಾಟಕ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಭಾ ಅರುಣ್‌ಕುಮಾರ್ ಹತ್ಯೆ ಪ್ರಕರಣದಲ್ಲಿ ಭಾರತ ಮೂಲದವರ ಕೈವಾಡ ಇರಬಹುದು ಎಂದು ಆಸ್ಟ್ರೇಲಿಯಾ ಪೊಲೀಸರು ಶಂಕಿಸಿದ್ದಾರೆ.
‘ಭಾರತದಲ್ಲಿ ನೆಲೆಸಿರುವ ಮತ್ತು ಪ್ರಭಾ ಅವರಿಗೆ ಗೊತ್ತಿರುವ ವ್ಯಕ್ತಿಯೊಬ್ಬ ಕೂಡ ಸಂಚಿನ ಹಿಂದೆ ಇರಬಹುದು. ಆದರೆ ಕೊಲೆಗಾರ ಮಾತ್ರ ಪ್ರಭಾಗೆ ಅಪರಿಚಿತ’ಎಂದು ಪೊಲೀಸ್ ಪತ್ತೆದಳದ ಅಧಿಕಾರಿ ರಿಚಿ ಸಿಮ್ ಹೇಳಿದ್ದಾರೆ.
ನಿಗೂಢ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಅಂದಾಜು 2 ಸಾವಿರ ಜನರನ್ನು ವಿಚಾರಣೆಗೆ ಒಳಪಡಿಸಿ, ಸುಮಾರು 250 ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ಮೈಂಡ್ ಟ್ರೀ ಕಂಪೆನಿಯ ಉದ್ಯೋಗಿಯಾಗಿದ್ದ ಪ್ರಭಾ, ನಿಯೋಜನೆ ಮೇಲೆ ಆಸ್ಟ್ರೇಲಿಯಕ್ಕೆ ತೆರಳಿದ್ದರು. ಕಳೆದ ವರ್ಷ ಮಾರ್ಚ್ 7ರಂದು ಸಂಜೆ ಸಿಡ್ನಿಯಲ್ಲಿ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.
Advertisement