ಹಾಡು ಮುಗಿಸಿದ ಪಾಪ್‍ಸ್ಟಾರ್ ಬೊವಿ

ಡೇವಿಡ್ ಬೊವಿ ಎಂದೇ ಖ್ಯಾತರಾಗಿದ್ದ ಬ್ರಿಟಿಷ್ ಪಾಪ್‍ಸ್ಟಾರ್ ಡೇವಿಡ್ ರಾಬರ್ಟ್ ಜೋನ್ಸ್ ಸೋಮವಾರ ನಿಧನರಾಗಿದ್ದಾರೆ...
ಡೇವಿಡ್ ಬೊವಿ
ಡೇವಿಡ್ ಬೊವಿ
ಲಂಡನ್: ಡೇವಿಡ್ ಬೊವಿ ಎಂದೇ ಖ್ಯಾತರಾಗಿದ್ದ ಬ್ರಿಟಿಷ್ ಪಾಪ್‍ಸ್ಟಾರ್ ಡೇವಿಡ್ ರಾಬರ್ಟ್ ಜೋನ್ಸ್ ಸೋಮವಾರ ನಿಧನರಾಗಿದ್ದಾರೆ. 18 ತಿಂಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿದ ಗಾಯಕ ತಮ್ಮ 69ನೇ ಹುಟ್ಟುಹಬ್ಬದ ಎರಡನೇ ದಿನವೇ ಬದುಕಿಗೆ ವಿದಾಯ ಹೇಳಿದ್ದಾರೆ. 
ಪಾಪ್ ತಾರೆಯಾಗಿ ತಮ್ಮ ವಿಶಿಷ್ಟ ಮುಖಚರ್ಯೆ, ಮೈಕಟ್ಟು, ಧ್ವನಿ ಹಾಗೂ ನಟನೆ ಮೂಲಕ ಸಂಗೀತಪ್ರಿಯರ ಆರಾಧ್ಯದೈವವಾಗಿದ್ದ ಬೊವಿ ಅವರಿಗೆ ಪತ್ನಿ ಇಮಾನ್, ಪುತ್ರ ಹಾಗೂ ಸಿನಿಮಾ ನಿರ್ದೇಶಕ ಡಂಕನ್ ಜೋನ್ಸ್ ಹಾಗೂ ಪುತ್ರಿ ಅಲೆಕ್ಸಾಂಡ್ರಿಯಾ ಜೋನ್ಸ್ ಇದ್ದಾರೆ. 
1969ರಲ್ಲಿ ತಮ್ಮ ಮೊದಲ ಹಿಟ್ ಆಲ್ಬಮ್ ಸ್ಪೇಸ್ ಒಡಿಟಿ ಮೂಲಕ ಬ್ರಿಟನ್ ಪಾಪ್ ತಾರೆಯಾಗಿ ಹೊರಹೊಮ್ಮಿದ ಬೊವಿ, ಬಳಿಕ ಸುಮಾರು 40 ವರ್ಷಗಳ ಸುದೀರ್ಘ ಕಾಲ ಪಾಪ್ ಸಂಗೀತ ಜಗತ್ತಿನ ಜನಪ್ರಿಯ ಗಾಯಕ, ಸಂಗೀತ ಸಂಯೋಜಕ, ಗೀತರಚನೆಕಾರ, ನಟನಾಗಿ ಸಂಗೀತ ಪ್ರಿಯರ ಮನಗೆದ್ದಿದ್ದರು. 
ಹೀರೋಸ್ ಆಲ್ಬಂ ಮೂಲಕ ರಾಕ್ ಸಂಗೀತದ ಹೊಸ ಅಲೆಗೆ ಕಾರಣರಾದ ಬೊವಿ, ರಾಕ್, ಹಾರ್ಡ್‍ರಾಕ್, ಸೌಲ್, ಡಾನ್ಸ್‍ಪಾಪ್, ಪಂಕ್ ಮತ್ತು ಎಲೆಕ್ಟ್ರಾನಿಕ್ ಪ್ರಕಾರಗಳಲ್ಲಿ ಮಿಂಚಿದವರು. ಅವರ ಇತ್ತೀಚಿನ ಆಲ್ಬಂ ಬ್ಲಾಕ್‍ಸ್ಟಾರ್ ಎರಡು ದಿನಗಳ ಹಿಂದಷ್ಟೇ ಜ.8ರಂದು ಅವರ 69ನೇ ಹುಟ್ಟುಹಬ್ಬದಂದು ಬಿಡುಗಡೆಯಾಗಿತ್ತು. 
ಬೊವಿ ನಿಧನದ ಸುದ್ದಿ ಹೊರ ಬೀಳುತ್ತಿದ್ದಂತೆ ವಿಶ್ವಾದ್ಯಂತ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ. ಸೋಮವಾರವಿಡೀ `ಡೇವಿಡ್‍ಬೊವಿ' ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್‍ನಲ್ಲಿ ಟ್ರೆಂಡ್ ಕೂಡ ಆಗಿತ್ತು. ಇದೇ ವೇಳೆ, ಬಾಲಿವುಡ್ ತಾರೆಯರು ಕೂಡ ಬೊವಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com