
ಔಗಾದಗು: ಇಂಡೋನೇಷ್ಯಾದ ಜಕಾರ್ತಾ ದಾಳಿಯ ಬಳಿಕ ಪಶ್ಚಿಮ ಆಫ್ರಿಕಾದ ಬರ್ಕಿನಾ ಫಾಸೋದಲ್ಲಿ ಉಗ್ರರು ರಕ್ತಪಾತವೆಸಗಿದ್ದಾರೆ. ಶನಿವಾರ ಇಲ್ಲಿನ ಐಷಾರಾಮಿ ಹೋಟೆಲ್ ಮೇಲೆ ದಾಳಿ ನಡೆಸಿದ ಉಗ್ರರು, ಒಳಗಿದ್ದವರನ್ನು ಒತ್ತೆಯಲ್ಲಿಟ್ಟುಕೊಂಡಿದ್ದಲ್ಲದೆ, 18 ದೇಶಗಳ 28 ಮಂದಿ ನಾಗರಿಕರನ್ನು ಹತ್ಯೆಗೈದಿದ್ದಾರೆ.
ಸತತ ಕಾರ್ಯಾಚರಣೆಯ ಬಳಿಕ ಭದ್ರತಾ ಪಡೆಗಳು ಇಬ್ಬರು ಮಹಿಳಾ ಜಿಹಾದಿಗಳು ಸೇರಿದಂತೆ ಎಲ್ಲ ನಾಲ್ವರು ಉಗ್ರರನ್ನು ಸದೆಬಡಿದಿದ್ದಾರೆ. 33 ಮಂದಿ ಗಾಯಾಳುಗಳು ಸೇರಿದಂತೆ ಒಟ್ಟು 126 ಮಂದಿಯನ್ನು ರಕ್ಷಿಸಲಾಗಿದೆ. ಪಾಶ್ಚಿಮಾತ್ಯರು, ವಿಶ್ವಸಂಸ್ಥೆ ಅಧಿಕಾರಿಗಳು ಹೆಚ್ಚಾಗಿ ತಂಗುತ್ತಿದ್ದ 147 ಕೊಠಡಿಗಳ ಐಷಾರಾಮಿ ಸ್ಪೆಂಡಿಡ್ ಹೋಟೆಲ್‍ಗೆ ನುಗ್ಗಿದ ಶಸ್ತ್ರಧಾರಿ ಉಗ್ರರು, ಒಳಗಿದ್ದ ವರನ್ನು ಒತ್ತೆಯಲ್ಲಿಟ್ಟುಕೊಂಡರು. ಬಳಿಕ ಒಂದೇ ಸಮನೆ ಗುಂಡಿನ ದಾಳಿ ಆರಂಭಿಸಿದರು. ಈ ದಾಳಿಯಲ್ಲಿ 18 ದೇಶಗಳ 28 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆಯಾದರೂ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲ್ಲಿನ ಆಂತರಿಕ ಸಚಿವ ಸೈಮನ್ ತಿಳಿಸಿದ್ದಾರೆ. ಇದೇ ಹೋಟೆಲ್‍ನಲ್ಲಿ ತಂಗಿದ್ದ ಲೇಬರ್ ಸಚಿವ ಕ್ಲೆಮೆಂಟ್ ಸವಾಡೋಗೋ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಹೊಣೆ ಹೊತ್ತ ಅಲ್‍ಖೈದಾ: ಅಲ್‍ಖೈದಾ ಇನ್ ದಿ ಇಸ್ಲಾಮಿಕ್ ಮಘ್ರೆಬ್(ಎಕ್ಯೂಐಎಂ) ಉಗ್ರ ಸಂಘಟ ನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ದಾಳಿಯು ಫ್ರಾನ್ಸ್ ಮತ್ತು ವಿಶ್ವಾಸವಿರದ ಪಾಶ್ಚಿ ಮಾತ್ಯರು ಮುಸ್ಲಿಮರ ನೆಲದಲ್ಲಿ ಮಾಡುತ್ತಿರುವ ಅನಾ ಚಾರಕ್ಕೆ ಪ್ರತೀಕಾರ ಎಂದೂ ಉಗ್ರರು ಹೇಳಿಕೊಂಡಿದ್ದಾರೆ ಎಂದು ಅಮೆರಿಕ ಮೂಲದ ಸೈಟ್ ಹೇಳಿದೆ. ದಾಳಿಕೋರರು ಮಾಲಿಯಲ್ಲಿನ ಅಲ್-ಮುರಾಬಿ ಟೂನ್ ಗುಂಪಿನ ಸದಸ್ಯರು ಎಂದೂ ಸೈಟ್ ಮಾಹಿತಿ ನೀಡಿದೆ.
ಉಗ್ರರ ಜೊತೆಗೆ ಅಗ್ನಿಯಟ್ಟಹಾಸ: ಅಚ್ಚರಿಯೆಂದರೆ, ಉಗ್ರರ ದಾಳಿ ನಡೆಯುತ್ತಿರುವಾಗಲೇ, ಹೋಟೆಲ್‍ನ ಪ್ರಮುಖ ಪ್ರವೇಶ ದ್ವಾರದಲ್ಲಿ ಬೆಂಕಿ ಅನಾಹುತವೂ ಸಂಭವಿಸಿತು. ಒಳಗಿದ್ದವರ ಚೀರಾಟ ಮುಗಿಲು ಮುಟ್ಟಿತ್ತು. ಜತೆಗೆ, ಹೋಟೆಲ್ ಹೊರಗಿದ್ದ ಸುಮಾರು 10 ವಾಹನಗಳೂ ಸುಟ್ಟು ಬೂದಿಯಾದವು. ಉಗ್ರರೇ ಕಾರಿನೊಳಗೆ ಬಾಂಬಿಟ್ಟು, ಅದು ಸ್ಫೋಟಗೊಂಡಾಗ ಹೋಟೆಲ್‍ನೊಳಕ್ಕೆ ನುಗ್ಗಿದ್ದರು ಎಂದು ಒಂದು ಮೂಲಗಳು ತಿಳಿಸಿವೆ.
ನಾಲ್ವರು ಉಗ್ರರ ಹತ್ಯೆ: 15 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಕೊಂದುಹಾಕಿವೆ. ಆದರೆ, ಇನ್ನೊಬ್ಬ ಉಗ್ರನು ಸಮೀಪದ ಬಾರ್‍ವೊಂದಕ್ಕೆ ನುಗ್ಗಿದ್ದನ್ನು ನಾನು ನೋಡಿದ್ದೇನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಈ ಮಾಹಿತಿಯ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕಳೆದ ತಿಂಗಳಷ್ಟೇ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ರೋಚ್ ಮಾರ್ಕ್ ಕ್ರಿಶ್ಚಿಯನ್ ಕಬೋರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Advertisement