ಕೆಎಫ್ ಸಿಯ ಮತ್ತೊಂದು ಎಡವಟ್ಟು: ಚಿಕನ್ ನಲ್ಲಿ ಜೀವಂತ ಹುಳಗಳು ಪತ್ತೆ
ನ್ಯೂಜಿಲ್ಯಾಂಡ್: ಕೆಎಫ್ ಸಿ ಚಿಕನ್ ಸರ್ವ್ ಮಾಡುವ ಬದಲು ಇಲಿ ಸರ್ವ್ ಮಾಡಿದ್ದ ಇತ್ತೀಚಿನ ಘಟನೆ ನೆನಪಿರಬೇಕಲ್ವ? ಈ ಘಟನೆ ನಡೆದ ಕೆಲವೇ ತಿಂಗಳುಗಳಲ್ಲಿ ಕೆಎಫ್ ಸಿ ಇಂಥದ್ದೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಅಂದು ವಾಷಿಂಗ್ಟನ್ ನಲ್ಲಿ ಕೆಎಫ್ ಸಿ ಚಿಕನ್ ಖರೀದಿಸಿದವರಿಗೆ ಚಿಕನ್ ಬದಲು ಇಲಿ ಸಿಕ್ಕಿದ್ದರೆ, ಇಂದು ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನಲ್ಲಿ ಕೆಎಫ್ ಸಿ ನಲ್ಲಿ ಪಾಪ್ಕಾರ್ನ್ ಚಿಕನ್ ಖರೀದಿಸಿದ ಸರಾಹ್- ಜಾನ್ ವಿಲಿಯಮ್ಸ್ ಗೆ ಚಿಕನ್ ನಲ್ಲಿ ಕೀಟಗಳ ಮೊಟ್ಟೆ ಸಿಕ್ಕಿದೆ. ಹುಳುಗಳು ಆಚೆ ಬರಲು ಸಿದ್ಧವಿದ್ದ ಮೊಟ್ಟೆಗಳನ್ನು ನೋಡಿದ ಕೂಡಲೇ ದಂಗಾದ ಸರಾಹ್- ಜಾನ್ ವಿಲಿಯಮ್ಸ್, ಕೆಎಫ್ ಸಿ ಅವಾಂತರವನ್ನು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಸಮೇತ ಅಪ್ ಡೇಟ್ ಮಾಡಿದ್ದಾರೆ.
ಕೆಎಫ್ ಸಿ ನಿರ್ಲಕ್ಷ್ಯದ ವಿರುದ್ಧ ಸರಾಹ್ ಜಾನ್ ವಿಲಿಯಮ್ಸ್ ದೂರು ದಾಖಲಿಸಿದ್ದು, ಆಹಾರದ ಗುಣಮಟ್ಟದ ಬಗ್ಗೆ ಆತಂಕಗೊಂಡಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಹೇಳಿದ್ದಾರೆ. ಇದೇ ರೀತಿಯ ಘಟನೆ ಭಾರತದಲ್ಲೂ ವರದಿಯಾಗಿದ್ದು ಚಿಕನ್ ನಲ್ಲಿ ಜೀವಂತ ಹುಳಗಳಿರುವುದು ಪತ್ತೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಫ್ ಸಿ, ಘಟನೆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದೆ. ಕೆಎಫ್ ಸಿ ತಂಡವೊಂದು ಆಕ್ಲೆಂಡ್ ನಲ್ಲಿರುವ ಕೆಎಫ್ ಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಎಫ್ ಸಿ, ಜಾಗತಿಕವಾಗಿ ಗುಣಮಟ್ಟದ ಆಹಾರ ಪೂರೈಕೆಗೆ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದೆ.
ನಿಮಗೆ ತಿಳಿದಿರುವಂತೆ, ಇದು ನಡೆದಿರುವುದು ನ್ಯೂಜೀಲ್ಯಾಂಡ್ ನಲ್ಲಿ, ಭಾರತದಲ್ಲಿ ಅಲ್ಲ. ನಮ್ಮ ಆಹಾರ ತಯಾರಿಕಾ ಪ್ರಕ್ರಿಯೆ, ಮಾನದಂಡ ಮತ್ತು ಗುಣಮಟ್ಟಗಳ ಕುರಿತು ನಮಗೆ ಸಂಪೂರ್ಣ ವಿಶ್ವಾಸವಿದೆ. ನಮ್ಮ ಅನುಭವದಂತೆ, ಇಂತಹ ಘಟನೆ ನಮ್ಮ ಯಾವುದೇ ಮಳಿಗೆಯಲ್ಲಿ ಸಂಭವಿಸುವ ಸಾಧ್ಯತೆ ಇಲ್ಲ ಎಂಬುದನ್ನು ನಾವು ಖಾತರಿಪಡಿಸುತ್ತೇವೆ ಎಂದು ಕೆಎಫ್ ಸಿ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ