ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ವಿವಾಹ ಕಾಯ್ದೆಯೇ ಇಲ್ಲದಿರುವುದರ ಬಗ್ಗೆ ಪಾಕ್ ಪತ್ರಿಕೆ ಡಾನ್ ಸಂಪಾದಕೀಯ ಬರೆದಿದ್ದು, ಕಾಯ್ದೆಯ ಅನುಪಸ್ಥಿತಿ ಪಾಕಿಸ್ತಾನದಲ್ಲಿರುವ ಹಿಂದು ಮಹಿಳೆಯರಿಗೆ ಹಲವು ಸಮಸ್ಯೆ ಉಂಟು ಮಾಡುತ್ತದೆ ಎಂದು ಹೇಳಿದೆ.
ಪಾಕಿಸ್ತಾನದ ಎಲ್ಲಾ ರಾಜಕಾರಣಿಗಳು ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಹಕ್ಕುಗಳ ಬಗ್ಗೆ ತ್ವರಿತಗತಿಯಲ್ಲಿ ಸಾರ್ವಜನಿಕ ಹೇಳಿಕೆ ನೀಡುತ್ತಾರೆ. ಆದರೆ ಹಿಂದೂಗಳ ಹಕ್ಕನ್ನು ಜಾರಿಗೊಳಿಸುವ ವಿಷಯ ಎದುರಾದಾಗ ತ್ವರಿತಗತಿಯ ಕ್ರಮ ಕೈಗೊಳ್ಳುವುದಿಲ್ಲ ಎಂದು 'ಹಿಂದು ವಿವಾಹ ಕಾಯ್ದೆ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ಸಂಪಾದಕೀಯ ಹೇಳಿದೆ. ವಿವಾಹ ಕಾಯ್ದೆ ಇಲ್ಲದೇ ಇರುವುದರಿಂದ ಬ್ಯಾಂಕ್ ಖಾತೆ, ವೀಸಾ ಪಡೆಯುವುದು ಸೇರಿದಂತೆ ಅಧಿಕಾರಿ ವರ್ಗದಿಂದ ಸಿಗಬೇಕಿರುವ ಸೌಲಭ್ಯ ಪಡೆಯುವುದಕ್ಕೆ ಹಿಂದೂ ಮಹಿಳೆಯರು ತಮ್ಮ ವಿವಾಹವನ್ನು ಸಾಬೀತು ಪಡಿಸುವ ವಿಷಯದಲಿ ಸವಾಲು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಮುಖವಾಗಿ ವಿಧವೆಯರಿಗೆ ಇದರಿಂದ ತೊಂದರೆಯುಂಟಾಗುತ್ತಿದೆ ಎಂದು ಡಾನ್ ಅಭಿಪ್ರಾಯಪಟ್ಟಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಪಾಕಿಸ್ತಾನದಲ್ಲಿರುವ ಹಿಂದೂ ಸಮುದಾಯ ಹೇಗೆ ನಿಭಾಯಿಸುತ್ತಿದೆ ಎಂದು ಡಾನ್ ಅಚ್ಚರಿ ವ್ಯಕ್ತಪಡಿಸಿದೆ. ಇದರೊಂದಿಗೆ ಆಘಾತಕಾರಿ ಅಂಶವೊಂದನ್ನು ಬಯಲು ಮಾಡಿರುವ ಡಾನ್ ಪತ್ರಿಕೆ ಸಂಪಾದಕೀಯ, ಹಿಂದೂ ವಿವಾಹಗಳಿಗೆ ದಾಖಲಾತಿಯೂ ಇರದೇ ಇರುವುದರಿಂದ ಒತ್ತಾಯಪೂರ್ವಕ ಮತಾಂತರಗಳು ಅವ್ಯಾಹತವಾಗಿ ನಡೆಯಲು ಹಿಂದುಗಳಿಗೆ ಸೂಕ್ತ ಕಾನೂನು ಇಲ್ಲದೇ ಇರುವುದು ಸಹಾಯಕಾರಿಯಾಗಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಉಲ್ಲೇಖಿಸಿದೆ. ಬಲೂಚಿಸ್ತಾನ ಹಾಗೂ ಖೈಬರ್ ಪಕ್ತುಂಕ್ವಾದ ಪ್ರಾಂತ್ಯಗಳು ಹಿಂದೂ ವಿವಾಹ ಕಾಯ್ದೆಗೆ ಅಗತ್ಯ ನಿರ್ಣಯಗಳನ್ನು ಅಂಗೀಕರಿಸಿವೆ. ಆದರೆ ಸಿಂಧ್ ಹಾಗೂ ಪಂಜಾಬ್ ವಿಧಾನಸಭೆಗಳು ಮಾತ್ರ ಈ ನಿರ್ಣಯಗಳನ್ನು ಅಂಗೀಕರಿಸಿಲ್ಲ. ಸಿಂಧ್ ಪ್ರಾಂತ್ಯದಲ್ಲೆ ಹೆಚ್ಚು ಹಿಂದೂಗಳು ವಾಸಿಸುತ್ತಿರುವುದರಿಂದ ಸಿಂಧ್ ಪ್ರಾಂತ್ಯ ಹಿಂದೂ ವಿವಾಹ ಕಾಯ್ದೆ ಜಾರಿಗೆ ತರಲು ಆಸಕ್ತಿ ವಹಿಸಬೇಕು ಎಂದು ಡಾನ್ ಪತ್ರಿಕೆ ಒತ್ತಾಯಿಸಿದೆ.
Advertisement