ಇಸ್ಲಮಾಬಾದ್: ಇಡೀ ಇಸ್ಲಮಾಬಾದ್ ನಲ್ಲಿ ಯಾವುದೇ ಹಿಂದೂ ದೇವಾಲಯವಿಲ್ಲ ಎಂದು ತಿಳಿದು ಆಶ್ಚರ್ಯಗೊಂಡ ಸಂಸದೀಯ ಸಮಿತಿ ಪಾಕಿಸ್ತಾನದ ರಾಜಧಾನಿಯಲ್ಲಿ ಹಿಂದೂ ದೇವಾಲಯ ಮತ್ತು ರುದ್ರಭೂಮಿಯನ್ನು ನಿರ್ಮಿಸುವಂತೆ ಸರ್ಕಾರಕ್ಕೆ ಸೋಮವಾರ ಸೂಚಿಸಿದೆ.
"ಹಿಂದೂ ಸಮುದಾಯಕ್ಕೆ ಪೂಜಿಸಲು ಇಸ್ಲಾಮಾಬಾದ್ ನಲ್ಲಿ ಒಂದು ಹಿಂದೂ ದೇವಾಲಯವಿಲ್ಲವೆಂದು ತಿಳಿದು ಆಶ್ಚರ್ಯವಾಯಿತು" ಎಂದು ಧಾರ್ಮಿಕ ವ್ಯವಹಾರಗಳ ರಾಷ್ಟ್ರೀಯ ಸಂಸತ್ ಉಪ ಸಮಿತಿಯ ಸಭೆಯ ನೇತೃತ್ವ ವಹಿಸಿದ್ದ ರಮೇಶ್ ಲಾಲ್ ಹೇಳಿದ್ದಾರೆ.
ಇಸ್ಲಮಾಬಾದ್ ನಲ್ಲಿ ಹಿಂದುಗಳಿಗೆ ಯಾವುದೇ ದೇವಾಲಯವಾಗಲಿ, ರುದ್ರಭೂಮಿಯಾಗಲಿ ಇಲ್ಲ ಎಂಬ ವಿಷಯ ಸಮಿತಿಗೆ ಆಶ್ಚರ್ಯ ಒಡ್ಡಿತ್ತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಇಸ್ಲಾಮಾಬಾದ್ ನಲ್ಲಿ ಕನಿಷ್ಠ 500 ಹಿಂದುಗಳು ವಾಸಿಸುತ್ತಿದ್ದು, ಮೃತಪಟ್ಟವರ ಕೊನೆಯ ವಿಧಿ ನಡೆಸಲು ಅವರು ರಾವಲಪಿಂಡಿಗೆ ಹೋಗಬೇಕಿದೆ ಎಂದು ಸಮಿತಿ ತಿಳಿಸಿದೆ.
"ಪೂಜಾ ಕಾರ್ಯಗಳಿಗೆ ಅವರ ನಗರದಲ್ಲಿ ದೇವಾಲಯ ಹೊಂದುವುದು ಹಿಂದುಗಳ ಮೂಲ ಹಕ್ಕು" ಎಂದಿರುವ ರಮೇಶ್ ಲಾಲ್ "ದೇಶದಲ್ಲಿ ಅಲ್ಪಸಂಖ್ಯಾತರನ್ನು ಸರ್ಕಾರ ಹೀಗೆ ನೋಡಿಕೊಳ್ಳುತ್ತಿದೆ" ಎಂದಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಹಿಂದೂ ದೇವಾಲಯಕ್ಕೆ ಭದ್ರತೆಯ ತೊಂದರೆ ಉಂಟಾಗುವ ಸಂಭವ ಇದೆ ಎನ್ನುವ ಸರ್ಕಾರದ ಕಾರಣವನ್ನು ತಳ್ಳಿಹಾಕಿರುವ ಸಂಸದೀಯ ಸಮಿತಿ "ಹೋಟೆಲ್ ಗಳಿಗೆ ಸರ್ಕಾರ ರಕ್ಷಣೆ ಕೊಡಬಹುದಾದರೆ, ದೇವಾಲಯಗಳಿಗೆ ಏಕಿಲ್ಲ" ಎಂದು ಸಮಿತಿಯ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.
ಸೈಡ್ಪುರ್ ಗ್ರಾಮ ಪ್ರದೇಶದಲ್ಲಿ ದೇವಾಲಯಕ್ಕೆ ಜಾಗ ಒದಗಿಸಲು ಸರ್ಕಾರಕ್ಕೆ ಸಮಿತಿ ಆಗ್ರಹಿಸಿದೆ.