ಇಸ್ಲಾಮಾಬಾದ್: 22 ವಿದೇಶಿಯರನ್ನು ಬಲಿ ಪಡೆದ ಢಾಕಾ ಉಗ್ರ ದಾಳಿಯಲ್ಲಿ ಐಎಸ್ಐ ಪಾತ್ರವಿದೆ ಎಂಬ ಮಾಧ್ಯಮಗಳ ವರದಿಯನ್ನು ಪಾಕಿಸ್ತಾನ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಅದು ಆಧಾರ ರಹಿತ ಮತ್ತು ಬೇಜವಾಬ್ದಾರಿತನದ್ದು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಢಾಕಾದ ಕೇಫೆಯೊಂದರಲ್ಲಿ ನಡೆದ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪಾತ್ರವಿರುವ ಶಂಕೆ ವ್ಯಕ್ತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಕಾರ್ಯಾಲಯದ ವಕ್ತಾರ ನಫೀಜ್ ಝಕಾರಿಯಾ, ಇದೊಂದು ಪ್ರಚೋದನಾಕಾರಿ ವರದಿ ಎಂದಿದ್ದಾರೆ.
ಭಾರತೀಯ ಮಾಧ್ಯಮ ಪ್ರಕಟಿಸಿರುವ ವರದಿ ಅತ್ಯಂತ ವಿಷಾದಯನೀಯ, ಬೇಜವಾಬ್ದಾರಿತನದ್ದು ಮತ್ತು ಪ್ರಚೋದನಕಾರಿ ವರದಿಯಾಗಿದ್ದು, ಪಾಕಿಸ್ತಾನ ಇಂತಹ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕುತ್ತದೆ ಎಂದು ಹೇಳಿದ್ದಾರೆ.
ಢಾಕಾದ ರೆಸ್ಟೋರೆಂಟ್ ನಲ್ಲಿ ನಡೆದ ಉಗ್ರ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಉಗ್ರರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲ ನೀಡಿರುವ ಕುರಿತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ರಾಜಕೀಯ ಸಲಹೆಗಾರ ಹುಸೇನ್ ತೌಫೀಕ್ ಇಮಾಮ್ ಆರೋಪಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.
ಢಾಕಾ ದಾಳಿ ಕುರಿತಂತೆ ಮಾಧ್ಯಮವೊಂದರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ತೌಫಿಕ್ ಇಮಾಮ್, "ಹಿಂದಿನಿಂದಲೂ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ಹಿಂದೆ ಪಾಕಿಸ್ತಾನ ನಿರಂತರ ಪ್ರೋತ್ಸಾಹ ಹಾಗೂ ನೆರವು ನೀಡುತ್ತಿದೆ" ಎಂದು ಆರೋಪಿಸಿದ್ದಾರೆ.