
ರಿಯಾದ್: ಸೌದಿ ಅರೇಬಿಯಾದ ಜೆಡ್ಡಾದಲ್ಲಿರುವ ಅಮೆರಿಕದ ದೂತವಾಸದ ಬಳಿ ಆತ್ಮಾಹುತಿ ದಾಳಿ ನಡೆಸಿದ ಉಗ್ರ ಪಾಕಿಸ್ತಾನದವನು ಎಂದು ಸೌದಿ ಅರೇಬಿಯಾ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.
ಅಮೆರಿಕ ಸ್ವಾತಂತ್ರ್ಯ ದಿನದಂದು ಅಮೆರಿಕ ದೂತವಾಸದ ಬಳಿ ಆತ್ಮಾಹುತಿ ದಾಳಿ ನಡೆದಿದ್ದು, ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಆತ್ಮಾಹುತಿ ದಾಳಿ ನಡೆಸಿದ ವ್ಯಕ್ತಿಯನ್ನು 35 ವರ್ಷದ ಅಬ್ದುಲ್ಲಾ ವಕಾರ್ ಖಾನ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನದ ಮೂಲದವನಾಗಿದ್ದ ಈತ ಜೆಡ್ಡಾದಲ್ಲಿ ಪತ್ನಿ ತಾಯಿಯೊಂದಿಗೆ 12 ವರ್ಷಗಳಿಂದ ವಾಸಿಸುತ್ತಿದ್ದ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ನಡೆದಿರುವ ಉಗ್ರ ದಾಳಿಯನ್ನು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಒಗ್ಗಟ್ಟಿಗೆ ಕರೆ ನೀಡಿದ್ದಾರೆ. ಬಾಂಗ್ಲಾದೇಶ, ಇಸ್ತಾನ್ ಬುಲ್ ನಲ್ಲಿ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲೂ ದಾಳಿ ನಡೆದಿದೆ.
ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತಿಲ್ಲವಾದರೂ, ಈ ನಗರಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಹವಣಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೇ ಈ ದಾಳಿಗಳನ್ನು ನಡೆಸಿದೆ ಎಂದು ಹೇಳಲಾಗುತ್ತಿದೆ.
Advertisement