ಮೊಗಡಿಶು: ಸೋಮಾಲಿಯಾದ ರಾಜಧಾನಿ ಮೊಗಡಿಶು ಅಪರಾಧ ತನಿಖಾ ಇಲಾಖೆ(ಸಿಐಡಿ)ಯ ಕಚೇರಿಯ ಬಳಿ ಭಾನುವಾರ ಉಗ್ರರು ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಉಗ್ರರು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೊಗಡಿಶುವಿನಲ್ಲಿ ಅಪರಾಧ ತನಿಖಾ ಕಚೇರಿಗೆ ಕಾರನ್ನು ನುಗ್ಗಿಸಲು ಉಗ್ರರು ಯತ್ನಿಸಿದ್ದು, ಘಟನೆಯಲ್ಲಿ ಇಬ್ಬರು ಉಗ್ರರು ಮತ್ತು ನಾಗರಿಕರು ಸೇರಿದಂತೆ ಒಟ್ಟು ಏಳು ಜನ ಮೃತಪಟ್ಟಿದ್ದಾರೆ ಎಂದು ಸೋಮಾಲಿಯಾ ಪೊಲೀಸ್ ಅಧಿಕಾರಿ ಅಲಿ ಮೊಹಮ್ಮದ್ ಅವರು ಹೇಳಿದ್ದಾರೆ.
ಈ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಇಸ್ಲಾಮಿ ಉಗ್ರ ಸಂಘಟನೆ ಅಲ್ ಶಬಾಬ್ ಹೊತ್ತುಕೊಂಡಿದೆ.
ಕಳೆದ ಮಂಗಳವಾರ ಅಲ್ ಶಬಾಬ್ ಉಗ್ರ ಸಂಘಟನೆ ಸೋಮಾಲಿಯಾದ ಆಫ್ರಿಕನ್ ಯೂನಿಯನ್ ಕಟ್ಟಡದಲ್ಲಿ ನಡೆಸಿದ ಎರಡು ಕಾರ್ ಬಾಂಬ್ ದಾಳಿಗಳಲ್ಲಿ ಒಟ್ಟು 13 ಜನ ಸಾವನ್ನಪ್ಪಿದ್ದರು.