
ವಾಷಿಂಗ್ ಟನ್: ಪ್ರಧಾನಿಯಾದ ಬಳಿಕ ನಾಲ್ಕನೇ ಬಾರಿಗೆ ಅಮೆರಿಕಗೆ ಭೇಟಿ ನೀಡುತ್ತಿರುವ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಶ್ವೇತ ಭವನ ಸಜ್ಜುಗೊಂಡಿದೆ.
ನರೇಂದ್ರ ಮೋದಿ ಭಾರತದ ಪ್ರಧಾನಿಯಾದ ನಂತರ ಮೂರು ಬಾರಿ ಅಮೆರಿಕ ಪ್ರವಾಸ ಕೈಗೊಂಡಿದ್ದರೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ. ಉಭಯ ದೇಶಗಳ ನಡುವಿನ ಉಭಯ ನಾಯಕರು ತಮ್ಮ ಅವಧಿಯಲ್ಲಿ ದ್ವಿಪಕ್ಷೀಯ ಸಂಬಂಧ ಹೊಸ ಎತ್ತರವನ್ನು ತಲುಪಿರುವುದಾಗಿ ಹೇಳಿದ್ದಾರೆ.
ಬರಾಕ್ ಒಬಾಮ ಅವರ ಅಮೆರಿಕ ಅಧ್ಯಕ್ಷ ಹುದ್ದೆಯ ಅವಧಿ ಜನವರಿಗೆ ಮುಕ್ತಾಯಗೊಳ್ಳಲಿದ್ದು, ಪ್ರಸ್ತುತ ನಡೆಯಲಿರುವ ದ್ವಿಪಕ್ಷೀಯ ಸಂಬಂಧ ಒಬಾಮ ಆಡಳಿತದ ಏಷ್ಯಾಗೆ ಹೆಚ್ಚಿನ ಆದ್ಯತೆ ಎಂಬ ಮಂತ್ರದ ಯಶಸ್ಸಿನ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅಮೆರಿಕದ ಈ ಭೇಟಿ ಮುಖ್ಯವಾಗಿದ್ದು ಅಮೆರಿಕ- ಭಾರತ ನಡುವಿನ ವ್ಯಾಪಾರ-ವಹಿವಾಟನ್ನು 120 ಮಿಲಿಯನ್ ಡಾಲರ್ ನಿಂದ 500 ಬಿಲಿಯನ್ ಡಾಲರ್ ಗೆ ಹೆಚ್ಚಿಸುವ ದೃಷ್ಟಿಯಿಂದ ಮಹತ್ವ ಪಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಬಗ್ಗೆ ಮಾತನಾಡಿರುವ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್, " ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯನಿರತ ವಲಯದಲ್ಲಿ ತಮ್ಮೊಂದಿಗೆ ನಿಕಟ ಸಂಬಂಧ ಹೊಂದಿರುವ ನಾಯಕನೆಂದು ಒಬಾಮ ಬಣ್ಣಿಸಿದ್ದು ಅಮೆರಿಕಾಗೆ ಸ್ವಾಗತಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಅಮೆರಿಕದ ಭೇಟಿ ಹಲವು ಕಾರಣಗಳಿಂದ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವ ಭೇಟಿ ಎಂದು ಹೇಳಬಹುದಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ. ಜೂ.7 ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ. ಇದಾದ ಬಳಿಕ ಅಮೆರಿಕ ಉದ್ಯಮಿಗಳೊಂದಿಗೆ ಮಾತುಕತೆ, ನಂತರ ಅಮೆರಿಕ ಕಾಂಗ್ರೆಸ್ (ಸಂಸತ್) ನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.
ಒಬಾಮ- ಮೋದಿ ಮಾತುಕತೆ ವೇಳೆ ಪ್ರಮುಖ ಘೋಷಣೆಗಳ ಸಾಧ್ಯತೆಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ ಪರಮಾಣು ಸ್ಥಾವರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಮೆರಿಕದ ವಿದ್ಯುತ್ ಸಂಸ್ಥೆ ವೆಸ್ಟಿಂಗ್ಹೌಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Advertisement