
ಮೆಕ್ಸಿಕೋ: ಪಂಚರಾಷ್ಟ್ರಗಳ ಪ್ರವಾಸದ ಭಾಗವಾಗಿ ಮೆಕ್ಸಿಕೋಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಅಭೂತಪೂರ್ವ ಸ್ವಾಗತ ದೊರೆತ್ತಿದ್ದು, ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಮೆಕ್ಸಿಕೋ ಅಧ್ಯಕ್ಷರು ಬೆಂಬಲ ನೀಡಿರುವುದು ಪ್ರವಾಸದ ವಿಶೇಷ ಘಟನೆಗಳಾಗಿವೆ. ಆದರೆ ಇವೆಲ್ಲಕ್ಕಿಂತಲೂ ವಿಶೇಷ ಘಟನೆ ಎಂದರೆ ಅದು ಮೆಕ್ಸಿಕೋದ ಅಧ್ಯಕ್ಷ ಎನ್ರಿಕೆ ಪೇನ ನಿಯೆಟೊ ತಮ್ಮ ಕಾರಿನಲ್ಲಿ ತಾವೇ ಚಾಲಕರಾಗಿ ಮೋದಿಯವರನ್ನು ರೆಸ್ಟೊರೆಂಟ್ ಗೆ ಕರೆದೊಯ್ದಿದ್ದು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಮೆಕ್ಸಿಕೋದ ಅಧ್ಯಕ್ಷ ಎನ್ರಿಕೆ ಪೇನ ತಾವೇ ಖುದ್ದಾಗಿ ಕಾರು ಚಾಲನೆ ಮಾಡಿ ಪ್ರಧಾನಿ ಮೋದಿ ಅವರನ್ನು ವಿಶ್ವದ ಟಾಪ್ 50 ರೆಸ್ಟೊರೆಂಟ್ ಗಳ ಪಟ್ಟಿಯಲ್ಲಿರುವ ರೆಸ್ಟೋರೆಂಟ್ ಗೆ ಕರೆದೊಯ್ದಿದ್ದಾರೆ. ಉಭಯ ನಾಯಕರೂ ಸಾರ್ವಜನಿಕರ ನಡುವೆ ‘ವೆಜಿಟೇರಿಯನ್ ಫೇರ್’ ಭೋಜನ ಸವಿದು ಎನ್ಎಸ್ ಜಿ ಬೆಂಬಲದ ಬಗ್ಗೆ ಚರ್ಚೆ ನಡೆಸಿದ್ದಾರೆ.
ನರೇಂದ್ರ ಮೋದಿ- ಎನ್ರಿಕೆ ಪೇನ ನಿಯೆಟೊ ರೆಸ್ಟೋರೆಂಟ್ ನಲ್ಲಿ ಭೋಜನ ಸವಿದಿದ್ದರ ಬಗ್ಗೆ ಪ್ರಧಾನಿ ಮೋದಿ- ಪೇನ ನಿಯೆಟೋ ಅವರ ಬೀನ್ ಟ್ಯಾಕೋ ಬಾಂಡಿಂಗ್ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ. 1986 ರಲ್ಲಿ ರಾಜೀವ್ ಗಾಂಧಿ ಭೇಟಿ ನೀಡಿದ ನಂತರ ಮೆಕ್ಸಿಕೋಗೆ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ.
Advertisement