ಸಿಯೋಲ್: ಅಣ್ವಸ್ತ್ರ ಬಳಸಲು ಸಜ್ಜಾಗಿರಿ ಎಂದು ಉತ್ತರ ಕೊರಿಯಾದ ಅಧ್ಯಕ್ಷ ಕಿಂ ಜಾಂಗ್ ಅನ್ ತಮ್ಮ ಸೈನ್ಯಕ್ಕೆ ಆದೇಶಿಸಿದ್ದಾರೆ. ಶತ್ರುಗಳಿಂದ ಬೆದರಿಕೆಗಳ ಜಾಸ್ತಿಯಾದ ಹಿನ್ನಲೆಯಲ್ಲಿ ಕಿಂ ಜಾಂಗ್ ಈ ರೀತಿಯ ಆದೇಶ ಹೊರಡಿಸಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
ವಿಶ್ವಸಂಸ್ಥೆಯ ವಿರೋಧವಿದ್ದರೂಉತ್ತರ ಕೊರಿಯಾ ನಾಲ್ಕು ಬಾರಿ ಅಣ್ವಸ್ತ್ರ ಪ್ರಯೋಗ ಮತ್ತು ರಾಕೆಟ್ ಉಡ್ಡಯಣವನ್ನು ನಡೆಸಿತ್ತು. ವಉತ್ತರಕೊರಿಯಾದ ಈ ನಿರ್ಧಾರಕ್ಕೆ ವಿಶ್ವಸಂಸ್ಥೆ ತೀವ್ರ ಆಕ್ಷೇಪವನ್ನೂ ವ್ಯಕ್ತ ಪಡಿಸಿತ್ತು.
ಈಗಾಗಲೇ ಹೊಸತಾಗಿ ನಿರ್ಮಿಸಿದ ರಾಕೆಟ್ ಲಾಂಚರ್ ಸೇರಿದಂತೆ ಹಲವು ಆಯುಧಗಳನ್ನು ಉ.ಕೊರಿಯಾ ಪರೀಕ್ಷೆ ನಡೆಸಿದೆ ಎಂದು ಹೇಳಲಾಗುತ್ತಿದೆ. ವಿಶ್ವ ಸಂಸ್ಥೆ ಈ ಪರೀಕ್ಷೆಗಳನ್ನು ನಡೆಸಬಾರದೆಂದು ತಡೆಯಾಜ್ಞೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಉತ್ತರಕೊರಿಯಾ ಉಡ್ಡಯಣ ಮಾಡಿದ ಹೃಸ್ವ ದೂರ ಕ್ಷಿಪಣಿಗಳು 100-150 ಕಿಮೀ ಸಂಚರಿಸಿ ಸಮುದ್ರಕ್ಕೆ ಬಿದ್ದಿವೆ ಎಂದು ದಕ್ಷಿಣ ಕೊರಿಯಾ ಹೇಳಿದೆ.
ಉತ್ತಮ ಸಾಮರ್ಥ್ಯವುಳ್ಳ ಅಣ್ವಸ್ತ್ರ ತಮ್ಮಲ್ಲಿದೆ ಎಂದು ಕಿಂ ಜಾಂಗ್ ಹೇಳಿದ್ದಾರೆ. ದೇಶದ ರಕ್ಷಣೆಗಾಗಿಯೇ ಇವುಗಳನ್ನು ನಿರ್ಮಿಸಿದ್ದು, ಯಾವ ಕ್ಷಣದಲ್ಲಾದರೂ ಇವುಗಳನ್ನು ಬಳಸಬಹುದು. ಇದೀಗ ಶತ್ರುಗಳ ವಿರುದ್ಧ ಹೋರಾಡಲು ನಮ್ಮ ಸೇನೆ ಸನ್ನದ್ಧವಾಗಿದೆ ಎಂದು ಕಿಂ ಹೇಳಿದ್ದಾರೆ.