ಅಮೆರಿಕ ಸುಪ್ರೀಂ ಕೋರ್ಟ್
ವಿದೇಶ
ಸುಪ್ರೀಂ ಜಡ್ಜ್ ಹುದ್ದೆ: ಒಬಾಮಾ ನಿರ್ಧಾರದ ಬಗ್ಗೆ ಭಾರತೀಯ ಅಮೆರಿಕನ್ನರ ಅಸಮಧಾನ
ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆಗೆ ಭಾರತೀಯ ಮೂಲದ ಅಮೆರಿಕ ಪ್ರಜೆ, ನ್ಯಾಯಮೂರ್ತಿ ಶ್ರೀನಿವಾಸನ್...
ವಾಷಿಂಗ್ಟನ್: ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆಗೆ ಭಾರತೀಯ ಮೂಲದ ಅಮೆರಿಕ ಪ್ರಜೆ, ನ್ಯಾಯಮೂರ್ತಿ ಶ್ರೀನಿವಾಸನ್ ಅವರನ್ನು ನಾಮನಿರ್ದೇಶನ ಮಾಡದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ನಿರ್ಧಾರದ ಬಗ್ಗೆ ಭಾರತೀಯ ಅಮೆರಿಕನ್ನರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೆ ಆ ಹುದ್ದೆಗೆ ಭಾರತೀಯ ಮೂಲದ ನ್ಯಾಯಾಧೀಶರೊಬ್ಬರನ್ನು ಪ್ರಬಲವಾಗಿ ಪರಿಗಣಿಸಿದ್ದ ಅಮೆರಿಕ ಅಧ್ಯಕ್ಷರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶ ಹುದ್ದೆಗೆ ಶ್ರೀನಿವಾಸನ್ ಅವರು ಅರ್ಹರಾಗಿದ್ದು, ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆಯ್ಕೆಯಾಗದಿರುವುದು ನಮ್ಮ ಸಮುದಾಯಕ್ಕೆ ಬೇಸರ ತಂದಿದೆ ಎಂದು ಸಿಲಿಕಾನ್ ವ್ಯಾಲಿ ಮೂಲದ ಭಾರತೀಯ ಉದ್ಯಮಿ ಎಂ.ಆರ್.ರಂಗಸ್ವಾಮಿ ಅವರು ಹೇಳಿದ್ದಾರೆ.
48 ವರ್ಷದ ಶ್ರೀನಿವಾಸನ್ ಅವರು ಸೇರಿದಂತೆ ಕೆಲವೇ ಕೆಲವು ನ್ಯಾಯಾಧೀಶರನ್ನು ಮಾತ್ರ ಒಬಾಮಾ ಅವರು ಪ್ರಮುಖ ಹುದ್ದೆಗೆ ಸಂದರ್ಶನ ಮಾಡಿದ್ದರು. ಅಂತಿಮವಾಗಿ ಒಬಾಮಾ ಅವರು ಮೆರಿಕ್ ಗಾರ್ಲ್ಯಾಂಡ್‌ರನ್ನು ಸುಪ್ರೀಂ ಕೋರ್ಟ್ ಗೆ ಆಯ್ಕೆ ಮಾಡಿದ್ದಾರೆ.
ಅಮೆರಿಕ ಸುಪ್ರೀಂಕೋರ್ಟ್ ನಲ್ಲಿ ಸುದೀರ್ಘ ಅವಧಿಗೆ ನ್ಯಾಯಾಧೀಶರಾಗಿದ್ದ ಖ್ಯಾತಿ ಹೊಂದಿದ್ದ ನ್ಯಾ| ಆ್ಯಂಟೋನಿನ್ ಸ್ಕೇಲಿಯಾ ಇತ್ತೀಚೆಗೆ ಟೆಕ್ಸಾಸ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ಇನ್ನೊಬ್ಬ ಜಡ್ಜ್ ನೇಮಕ ಮಾಡಲು ಅರ್ಹರ ಪಟ್ಟಿ ತಯಾರಿಸಲಾಗಿತ್ತು. ಮೂರು ಮಂದಿ ಸ್ಪರ್ಧಾಕಣದಲ್ಲಿದ್ದು, ಕೊನೆಗೆ ಇಬ್ಬರು ಕಣದಲ್ಲಿ ಉಳಿದಿದ್ದರು. ಅದರಲ್ಲಿ ಶ್ರೀನಿವಾಸನ್ ಒಬ್ಬರಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ