
ನ್ಯೂಯಾರ್ಕ್: ಫಾರ್ಚೂನ್ ಪತ್ರಿಕೆ ತಯಾರಿಸುವ ವಿಶ್ವದ 50 ಮಂದಿ ಮಹಾನ್ ನಾಯಕರ ಪಟ್ಟಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸ್ಥಾನ ಪಡೆದಿದ್ದು, ಈ ಪಟ್ಟಿಗೆ ಸೇರ್ಪಡೆಯಾಗಿರುವ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಫಾರ್ಚೂನ್ ಪತ್ರಿಕೆಯು ತಯಾರಿಸಿರುವ ವಿಶ್ವದ ಮಹಾನ್ ನಾಯಕರ ಪಟ್ಟಿಯಲ್ಲಿ ಅಮೆಝಾನ್ ಸಿಇಒ ಜೆಫ್ ಬೆಝೊ ಮೊದಲ ಸ್ಥಾನ ಗಳಿಸಿದ್ದಾರೆ. ಫಾರ್ಚೂನ್ ಪತ್ರಿಕೆಯ ಮೂರನೇ ವಾರ್ಷಿಕ ವಿಶ್ವದ ಮಹಾನ್ ನಾಯಕರ ಪಟ್ಟಿಯಲ್ಲಿ 47 ವರ್ಷದ ಆಮ್ ಆದ್ಮಿ ಪಕ್ಷದ ನಾಯಕ 42ನೇ ಸ್ಥಾನ ಗಳಿಸಿದ್ದಾರೆ.
ಸಮ-ಬೆಸ ಸಾರಿಗೆ ವ್ಯವಸ್ಥೆಯ ಕಲ್ಪನೆಯನ್ನು ಜಾರಿಗೊಳಿಸುವ ಮೂಲಕ ನವದೆಹಲಿಯ ಮಾಲಿನ್ಯ ನಿಯಂತ್ರಿಸಲು ನಡೆಸಿದ ಪ್ರಯತ್ನಕ್ಕಾಗಿ ಫಾರ್ಚೂನ್ ‘ಮಹಾನ್ ನಾಯಕರ’ ಪಟ್ಟಿಯಲ್ಲಿ ಕೇಜ್ರಿವಾಲ್ ಅವರಿಗೆ ಸ್ಥಾನ ಕಲ್ಪಿಸಿದೆ.
ದೆಹಲಿಯ ರಸ್ತೆಗಳಲ್ಲಿ ಪರ್ಯಾಯ ದಿನಗಳಂದು ಸಮ-ಬೆಸ ಸಂಖ್ಯೆಯ ವಾಹನಗಳು ಸಂಚರಿಸುವಂತಹ ವ್ಯವಸ್ಥೆ ಮೂಲಕ ದೆಹಲಿಯ ಮಾಲಿನ್ಯ ನಿವಾರಣೆ ನಿಟ್ಟಿನಲ್ಲಿ ದೆಹಲಿ ಸರ್ಕಾರ ಗಮನಾರ್ಹ ಪ್ರಯತ್ನ ಮಾಡಿತ್ತು.
ದಕ್ಷಿಣ ಕರೋಲಿನಾದ ಭಾರತೀಯ ಮೂಲದ ಅಮೆರಿಕನ್ ಗವರ್ನರ್ ನಿಕ್ಕಿ ಹಾಲೇ ಅವರು ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದ್ದರೆ, ಭಾರತೀಯ ಮೂಲದ ಇನ್ನೊಬ್ಬ ಅಮೆರಿಕನ್ ಪ್ರಜೆ ರೇಶಮ್ ಸೌಜನಿ 20ನೇ ಸ್ಥಾನ ಗಳಿಸಿದ್ದಾರೆ.
Advertisement