
ವಾಶಿಂಗ್ಟನ್: ಈ ವಾರದ ಅಂತ್ಯದಲ್ಲಿ ಅಣು ಭದ್ರತೆಯ ಬಗ್ಗೆ ನಡೆಯಲಿರುವ ಎರಡು ದಿನದ ಶೃಂಗಸಭೆಯ ಜೊತೆಜೊತೆಗೇ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಬಗ್ಗೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ವಿಶ್ವ ನಾಯಕರ ಜೊತೆಗೆ ಪ್ರತ್ಯೇಕವಾಗಿ ಚರ್ಚಿಸಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
"ಅಣು ಭದ್ರತಾ ಶೃಂಗಸಭೆಗೆ ಹಲವಾರು ವಿಶ್ವ ನಾಯಕರು ವಾಶಿಂಗ್ಟನ್ ಗೆ ಆಗಮಿಸುತ್ತಿರುವುದರಿಂದ, ಐಸಿಸ್ ಭಯೋತ್ಪಾದಕ ಸಂಘಟನೆಯ ಬಲ ಕುಂದಿಸಲು ಮತ್ತು ಕೊನೆಗೆ ಅದನ್ನು ನಾಶಪಡಿಸಲು, ಮಿತ್ರ ರಾಷ್ಟ್ರಗಳ ಸಹಕಾರಕ್ಕಾಗಿ ಚರ್ಚೆ ಮಾಡಲಿದ್ದಾರೆ" ಎಂದು ಶ್ವೇತ ಭವನದ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ಪತ್ರಕರ್ತರಿಗೆ ನೆನ್ನೆ ತಿಳಿಸಿದ್ದಾರೆ.
ಮಾರ್ಚ್ ೩೧ ಮತ್ತು ಏಪ್ರಿಲ್ ೧ ರಂದು ನಡೆಯಲಿರುವ ಈ ಶೃಂಗಸಭೆಯಲ್ಲಿ ೪೦ ದೇಶಗಳಿಂದ ಮುಖಂಡರು ಆಗಮಿಸಲಿದ್ದಾರೆ.
"ಐಸಿಸ್ ಭಯೋತ್ಪಾದಕ ಸಂಘಟನೆ ಅಣು ಶಸ್ತ್ರಾಸ್ತ್ರಗಳನ್ನು ಪಡೆಯುವ ಅಪಾಯದ ಬಗ್ಗೆ ನಮಗೆ ಕಳವಳ ಇರುವುದರಿಂದ ಈ ಚರ್ಚೆ ಅಗತ್ಯವಾಗಿದೆ. ಚರ್ಚೆ ಇನ್ನೂ ವಿಸ್ತಾರವಾಗಿ ನಡೆಯಲಿದೆ" ಎಂದು ಅರ್ನೆಸ್ಟ್ ತಿಳಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆಯಲ್ಲಿ ಭಾಗವಹಿಸಲು ಗುರುವಾರ ಬಂದಿಳಿಯಲಿದ್ದಾರೆ. ಐಸಿಸ್ ಬಗ್ಗೆ ಒಬಾಮಾ ಯಾರೆಲ್ಲಾ ವಿಶ್ವ ನಾಯಕರ ಜೊತೆಗೆ ಚರ್ಚಿಸಲಿದ್ದಾರೆ ಎಂಬ ಪಟ್ಟಿಯನ್ನು ಅಮೇರಿಕಾ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ.
Advertisement