ಎಲ್ ಜಿ ಬಿ ಟಿ ಹಕ್ಕುಗಳು ಮಾನವ ಹಕ್ಕುಗಳೇ: ಒಬಾಮಾ

ಸಲಿಂಗ ಕಾಮ, ತೃತೀಯ ಲಿಂಗಿಗಳ (ಎಲ್ ಜಿ ಬಿ ಟಿ) ಹಕ್ಕುಗಳು ಕೂಡ ಮಾನವ ಹಕ್ಕುಗಳು ಎಂದಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜಾಗತಿಕವಾಗಿ ಈ ಸಮುದಾಯದ ಬಗ್ಗೆ ಇರುವ ತಾರತಮ್ಯ
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ

ವಾಶಿಂಗ್ಟನ್: ಸಲಿಂಗ ಕಾಮ, ತೃತೀಯ ಲಿಂಗಿಗಳ (ಎಲ್ ಜಿ ಬಿ ಟಿ) ಹಕ್ಕುಗಳು ಕೂಡ ಮಾನವ ಹಕ್ಕುಗಳು ಎಂದಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜಾಗತಿಕವಾಗಿ ಈ ಸಮುದಾಯದ ಬಗ್ಗೆ ಇರುವ ತಾರತಮ್ಯ ಕೊನೆಗಾಣಬೇಕು ಎಂದಿದ್ದಾರೆ.

"ಎಲ್ಲ ಜನರನ್ನೂ ಸಮನಾಗಿ ಮತ್ತು ಗೌರವದಿಂದ ನಡೆಸಿಕೊಳ್ಳುವ ತತ್ವಕ್ಕೆ ನಮ್ಮ ದೇಶ ಬದ್ಧವಾಗಿದೆ" ಎಂದು ಹೋಮೋಫೋಬಿಯಾ ಮತ್ತು ಟ್ರಾನ್ಸ್ ಫೋಬಿಯಾ ವಿರುದ್ಧದ ಅಂತರಾಷ್ಟ್ರೀಯ ದಿನದಂದು ಅಮೆರಿಕಾ ಅಧ್ಯಕ್ಷ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಈ ತಾರತಮ್ಯ ನಿವಾರಿಸುವ ಗುರಿಯತ್ತ ಮುನ್ನಡೆಯುವುದು ಅಮೇರಿಕಾ ರಾಜತಾಂತ್ರಿಕತೆಯ ಪ್ರಮುಖ ನೀತಿ. ಈ ನಿಟ್ಟಿನಲ್ಲಿ ನನ್ನ ಆಡಳಿತ ಎಲ್ ಜಿ ಬಿ ಟಿ ಸಮುದಾಯದ ಪ್ರತಿಯೊಬ್ಬರ ಹಕ್ಕುಗಳ ಬಗ್ಗೆ ಜಾಗತಿಕವಾಗಿ ವಿಶ್ವದ ಗಮನ ಸೆಳೆದಿರುವುದಕ್ಕೆ ಹೆಮ್ಮೆಯಿದೆ" ಎಂದು ಒಬಾಮಾ ಹೇಳಿದ್ದಾರೆ.

ಲೆಸ್ಬಿಯನ್, ಗೇ, ಬೈ ಸೆಕ್ಸುಯಲ್ ಮತ್ತು ತೃತೀಯ ಲಿಂಗಿ (ಎಲ್ ಜಿ ಬಿ ಟಿ) ಸಮುದಾಯದ ಮದುವೆ ಸಮಾನತೆಯನ್ನು ಇತ್ತೀಚಿನ ದಿನಗಳಲ್ಲಿ ಅಮೇರಿಕಾ ಎತ್ತಿಹಿಡಿದಿರುವುದನ್ನು ಕೂಡ ಅವರು ಪ್ರಶಂಸಿಸಿದ್ದಾರೆ.

"ಈ ನಿಟ್ಟಿನಲ್ಲಿ ನಮ್ಮ ದೇಶ ತಂದಿರುವ ಸುಧಾರಣೆಗಳ ಬಗ್ಗೆ ಹೆಮ್ಮೆಯಿದೆ ಮತ್ತು ಕಳೆದ ವರ್ಷದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಆ ಸಮುದಾಯ ಮದುವೆ ಸಮಾನತೆ ನೀತಿಯನ್ನು ಕೂಡ ಜಾರಿ ಮಾಡಿದ್ದೇವೆ" ಎಂದು ಅವರು ಹೇಳಿದ್ದಾರೆ.

ನಮ್ಮ ದೇಶದಲ್ಲಿ ಮತ್ತು ವಿದೇಶಗಳಲ್ಲಿ ಹೋಮೋಫೋಬಿಯಾ ಮತ್ತು ಟ್ರಾನ್ಸ್ ಫೋಬಿಯಾ ಗಳನ್ನು ಹತ್ತಿಕ್ಕಲ್ಲಿ ಇನ್ನೂ ಕೆಲಸ ಮಾಡಲು ಸಾಕಷ್ಟಿದೆ ಎಂದು ಕೂಡ ಒಬಾಮಾ ಹೇಳಿದ್ದಾರೆ.

"ತಾರತಮ್ಯದಿಂದ, ಹಿಂಸೆಯ ಭಯದಿಂದ ಮತ್ತು ಶಿಕ್ಷೆಗೊಳಗಾಗುವ ಭೀತಿಯಿಂದ ವಿಶ್ವದ ಹಲವೆಡೆ ಎಲ್ ಜಿ ಬಿ ಟಿ ಸಮುದಾಯದ ವ್ಯಕ್ತಿಗಳು ಚಿಪ್ಪಿನೊಳಗೆ ಸೇರಿಕೊಂಡು ತಮ್ಮ ಗುರುತನ್ನು ಮುಚ್ಚಿಡುತ್ತಾರೆ. ಎಲ್ಲ ದೇಶಗಳು ಮತ್ತು ಎಲ್ಲ ಸಮುದಾಯಗಳು ಇದನ್ನು ಸರಿಪಡಿಸಲು ಶ್ರಮ ವಹಿಸಬೇಕು" ಎಂದು ಅವರು ಹೇಳಿದ್ದಾರೆ.

"ಅದೃಷ್ಟವಶಾತ್ ವಿಶ್ವದಾದ್ಯಂತ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಒಳ್ಳೆಯ ನಾಗರಿಕರು, ಎಲ್ ಜಿ ಬಿ ಟಿ ಹಕ್ಕುಗಳು ಕೂಡ ಮಾನವ ಹಕ್ಕುಗಳು ಎಂಬ ಸರಳ ಸತ್ಯವನ್ನು ತಿಳಿಸಲು ಸದಾ ಹೋರಾಡುತ್ತಿದ್ದಾರೆ. ಅವರ ಕೆಲಸವನ್ನು ಅಮೇರಿಕಾ ಗೌರವಿಸುತ್ತದೆ ಮತ್ತು ಮಾನವೀಯತೆಗಾಗಿ ದುಡಿಯುವ ಅವರ ಹೋರಾಟವನ್ನು ಬೆಂಬಲಿಸುತ್ತದೆ" ಎಂದು ಕೂಡ ಒಬಾಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com