ಸಾಂದರ್ಭಿಕ ಚಿತ್ರ
ವಿದೇಶ
ನಾಪತ್ತೆಯಾಗಿದ್ದ ಈಜಿಪ್ಟ್ ವಿಮಾನ ಪತನ, 66 ಮಂದಿ ಸಾವು
ನಾಪತ್ತೆಯಾಗಿದ್ದ ಈಜಿಪ್ಟ್ ಏರ್ ವಿಮಾನ ಮೆಡಿಟರೇನಿಯನ್ ಸಮುದ್ರದಲ್ಲಿ ಪತನವಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ...
ಕೈರೋ: ನಾಪತ್ತೆಯಾಗಿದ್ದ ಈಜಿಪ್ಟ್ ಏರ್ ವಿಮಾನ ಮೆಡಿಟರೇನಿಯನ್ ಸಮುದ್ರದಲ್ಲಿ ಪತನವಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಗುರುವಾರ ಖಚಿತಪಡಿಸಿದ್ದಾರೆ.
ಪ್ಯಾರಿಸ್‌ನಿಂದ ಕೈರೋಗೆ ಹಾರುತ್ತಿದ್ದ ಈಜಿಪ್ಟ್ ಏರ್ ವಿಮಾನ ಪೂರ್ವ ಮೆಡಿಟರೇನಿಯ ಸಮುದ್ರದಲ್ಲಿ ಪತನವಾಗಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 66 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗಿನ ಜಾವ ವಿಮಾನವು ಮೆಡಿಟರೇನಿಯನ್ ಸಮುದ್ರದ ಮೇಲೆ 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ರೆಡಾರ್ನಿಂದ ಸಂಪರ್ಕ ಕಡಿದುಕೊಂಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಈಜಿಪ್ಟ್ ವಿಮಾನ ಪತನವಾಗಿರುವುದನ್ನು ಖಚಿತಪಡಿಸಲಾಗಿದ್ದು, ವಿಮಾನದ ಅವಶೇಷಗಳಿಗಾಗಿ ಶೋಧ ನಡೆಯುತ್ತಿದೆ.
ವಿಮಾನ ತಾಂತ್ರಿಕ ಕಾರಣದಿಂದ ಪತನವಾಗಿರಬಹುದು ಅಥವಾ ಉಗ್ರರು ಹೊಡೆದುರುಳಿಸಿರುವ ಸಾಧ್ಯತೆ ಸಹ ಇದೆ. ಆದರೆ ಈಗಲೇ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ, ತನಿಖೆಯ ನಂತರ ಸತ್ಯ ಹೊರಬರಲಿದೆ ಎಂದು ಈಜಿಪ್ಟ್ನ ಪ್ರಧಾನಿ ಷರೀಫ್ ಇಸ್ಮಾಯಿಲ್ ತಿಳಿಸಿದ್ದಾರೆ.
ವಿಮಾನದಲ್ಲಿ 56 ಪ್ರಯಾಣಿಕರು ಮತ್ತು 10 ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಈಜಿಪ್ಟ್ನ 30 ಜನ, ಫ್ರಾನ್ಸ್ನ 15, ಇಬ್ಬರು ಇರಾಕಿ ನಾಗರಿಕರು ಮತ್ತು ಬ್ರಿಟನ್, ಬೆಲ್ಜಿಯಂ, ಕುವೈತ್, ಸೌದಿ ಅರೇಬಿಯಾ, ಸುಡಾನ್, ಚಾದ್, ಪೋರ್ಚುಗಲ್, ಅಲ್ಜೀರಿಯಾದ ಮತ್ತು ಕೆನಡಾದ ಒಬ್ಬರು ಪ್ರಯಾಣಿಸುತ್ತಿದ್ದರು.


