ಹಣ ಹೊಂದಿಸಲು ಪಾಕ್ ಪರದಾಟ, ಅಮೆರಿಕದ ಎಫ್-16 ವಿಮಾನ ಖರೀದಿ ವಿಫಲ ಸಾಧ್ಯತೆ

ಹಣ ಹೊಂದಿಸಲು ಪರದಾಡುತ್ತಿರುವ ಪಾಕಿಸ್ತಾನ ಅಮೆರಿಕದಿಂದ 700 ಮಿಲಿಯನ್ (70 ಕೋಟಿ) ಡಾಲರ್ ಮೊತ್ತದ 8 ಎಫ್-16 ವಿಮಾನ ಖರೀದಿ....
ಎಫ್-16 ವಿಮಾನ
ಎಫ್-16 ವಿಮಾನ
ಇಸ್ಲಾಮಾಬಾದ್: ಹಣ ಹೊಂದಿಸಲು ಪರದಾಡುತ್ತಿರುವ ಪಾಕಿಸ್ತಾನ ಅಮೆರಿಕದಿಂದ 700 ಮಿಲಿಯನ್ (70 ಕೋಟಿ) ಡಾಲರ್ ಮೊತ್ತದ 8 ಎಫ್-16 ವಿಮಾನ ಖರೀದಿ ಒಪ್ಪಂದವನ್ನು ಅಂತಿಮಗೊಳಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಪಾಕಿಸ್ತಾನದ ಪತ್ರಿಕೆ ವರದಿ ಮಾಡಿದೆ.
ನವಾಜ್ ಷರೀಫ್ ನೇತೃತ್ವದ ಸರ್ಕಾರ ಮೇ 24ರೊಳಗೆ ವಿಮಾನ ಖರೀದಿ ಸಂಬಂಧ ಅಂತಿಮ ಒಪ್ಪಿಗೆ ಪತ್ರ ರವಾನಿಸಬೇಕಿತ್ತು. ಪತ್ರ ರವಾನಿಸಲು ಮೇ. 24 ಕೊನೆಯ ದಿನಾಂಕವಾಗಿತ್ತು. ಆದರೆ ವಿಮಾನ ಖರೀದಿ ಸಂಬಂಧ ಪಾಕಿಸ್ತಾನವು ಪೂರ್ಣ ಮೊತ್ತವನ್ನು ಪಾವತಿಸಲು ಹಣ ಹೊಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಒಪ್ಪಿಗೆ ಪತ್ರ ರವಾನಿಸಿಲ್ಲ. ಹಾಗಾಗಿ ವಿಮಾನ ಖರೀದಿ ಸಾಧ್ಯವಾಗುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಈ ಮೊದಲು ವಿಮಾನ ಖರೀದಿಗೆ ಆರ್ಥಿಕ ಸಹಾಯ ಮಾಡುವುದಾಗಿ ಅಮೆರಿಕ ತಿಳಿಸಿತ್ತು. ಹಾಗಾಗಿ ಪಾಕ್ ಸರ್ಕಾರ 270 ಮಿಲಿಯನ್ ಡಾಲರ್​ಗಳಲ್ಲಿ 8 ಯುದ್ಧ ವಿಮಾನ ಖರೀದಿಸಲು ಮುಂದಾಗಿತ್ತು. ಆದರೆ ಅಮೆರಿಕ ನೀಡಿದ ನೆರವನ್ನು ಪಾಕಿಸ್ತಾನ ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಅಮೆರಿಕದ ಸಂಸತ್ತು ಪಾಕ್​ಗೆ ಆರ್ಥಿಕ ಸಹಾಯ ಒದಗಿಸುವುದಕ್ಕೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ಪಾಕ್​ಗೆ ಪೂರ್ಣ ಮೊತ್ತ ಪಾವತಿಸಿ ವಿಮಾನ ಖರೀದಿಸುವಂತೆ ಸೂಚಿಸಿತ್ತು ಮತ್ತು ಇದಕ್ಕೆ ಗಡುವು ವಿಧಿಸಿತ್ತು.
ಪಾಕ್ ಸರ್ಕಾರ ವಿಮಾನ ಖರೀದಿಗೆ ಒಪ್ಪಿಗೆ ಪತ್ರ ರವಾನಿಸಿಲ್ಲ, ಹೀಗಾಗಿ ವಿಮಾನ ಖರೀದಿ ಸಂಬಂಧ ಹೊಸದಾಗಿ ಮಾತುಕತೆ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ವರದಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com