

ಲಂಡನ್: ಎರಡನೇ ಮಹಾಯುದ್ಧದ ವೇಳೆ ನಾಪತ್ತೆಯಾಗಿದ್ದ ಬ್ರಿಟನ್‌ನ ರಾಯಲ್ ನೇವಿಯ ಜಲಾಂತರ್ಗಾಮಿಯೊಂದು ಇದೀಗ ಇಟಲಿ ಕರಾವಳಿಯ ದೂರ ಸಮುದ್ರದಾಳದಲ್ಲಿ ಪತ್ತೆಯಾಗಿದೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಶತ್ರು ದೇಶಗಳಿಂದ ಸಮುದ್ರದಾಳದಲ್ಲಿ ಹುಗಿಯಲ್ಪಟ್ಟಿದ್ದ ನೆಲ ಬಾಂಬ್ ಸ್ಫೋಟಗೊಂಡು ನಾಶವಾಯಿತೆಂದು ಭಾವಿಸಲಾಗಿದ್ದ ಈ ಜಲಾಂತರ್ಗಾಮಿಯೊಳಗೆ ಆ ಸಂದರ್ಭದಲ್ಲಿ ಇದ್ದ 71 ಮಂದಿ ಚಾಲಕ ಸಿಬ್ಬಂದಿಯ ಮೃತ ದೇಹಗಳು ಕೂಡ ಯಥಾಸ್ಥಿತಿಯಲ್ಲಿ ಪತ್ತೆಯಾಗಿದೆ.
ಇಟಲಿಯ ಸಾರ್ಡಿನಿಯಾದ ಈಶಾನ್ಯ ಕರಾವಳಿಯಲ್ಲಿನ ಟ್ಯಾವೋಲಾರಾ ದ್ವೀಪಕ್ಕೆ ಸಮೀಪ, ಸುಮಾರು 100 ಮೀಟರ್ ಸಮುದ್ರದಾಳದಲ್ಲಿ ಶೋಧ ಕಾರ್ಯ ಕೈಗೊಂಡ ಮುಳುಗು ತಜ್ಞರ ತಂಡಕ್ಕೆ 1,290 ಟನ್ ಸಾಮರ್ಥ್ಯದ ಈ ಜಲಾಂತರ್ಗಾಮಿ ಈಚೆಗೆ ಪತ್ತೆಯಾಗಿದೆ.
1943ರ ಜನವರಿ 2ರಂದು ಬ್ರಿಟನ್‌ನ ಈ ಜಲಾಂತರ್ಗಾಮಿಯು ಯಾವುದೇ ಸುಳಿವಿಲ್ಲದೆ ನಾಪತ್ತೆಯಾಗಿತ್ತು. ಓಲ್‌ಬಿಯಾ ಕೊಲ್ಲಿಯಲ್ಲಿನ ಸಾಗರದಾಳದಲ್ಲಿ ಶತ್ರು ಸೇನೆಗಳು ಹುಗಿದಿಟ್ಟಿದ್ದ ನೆಲ ಬಾಂಬ್ ಸ್ಫೋಟಕ್ಕೆ ಈ ಜಲಾಂತರ್ಗಾಮಿ ಧ್ವಂಸಗೊಂಡಿತ್ತೆಂದು ನಂಬಲಾಗಿತ್ತು.
ಸಾಗರದಾಳದಲ್ಲಿ ಈ ಜಲಾಂತರ್ಗಾಮಿ ಅಂದು ಹೇಗಿದ್ದಿತೋ ಹಾಗೆ, ಯಾವುದೇ ರೀತಿಯ ಹಾನಿಯನ್ನು ಕಾಣದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲಿ ಅಂದು ಮೃತಪಟ್ಟಿದ್ದ 71 ಯೋಧರ ಮೃತ ದೇಹಗಳು ಗೋಚರವಾಗಿವೆ.
ಎರಡನೇ ಮಹಾಯುದ್ಧ ಕಾಲದ ದಾಖಲೆಗಳಿಂದ ತಿಳಿದುಬರುವಂತೆ ಈ ನತದೃಷ್ಟ ಜಲಾಂತರ್ಗಾಮಿಯು 1942ರ ಡಿಸೆಂಬರ್ 28ರಂದು ಮಾಲ್ಟಾದಿಂದ ಹೊರಟಿತ್ತು. ಲಾ ಮ್ಯಾಡೆಲಿನಾ ಬಂದರಿನಲ್ಲಿ ಲಂಗರು ಹಾಕಲಿದ್ದ ಇಟಲಿಯ ಎರಡು ಸಮರ ನೌಕೆಗಳನ್ನು ನಾಶಪಡಿಸುವುದೇ ಬ್ರಿಟನ್‌ನ ಈ ಜಲಾಂರ್ಗಾಮಿಯ ಪ್ರಪ್ರಥಮ ಗುರಿಯಾಗಿತ್ತು.
ಆದರೆ ಡಿಸೆಂಬರ್ 31ರಂದು ತನ್ನ ಮೂಲ ನೆಲೆಗೆ ಸಂದೇಶವೊಂದನ್ನು ರವಾನಿಸಿದ ಬಳಿಕ ಈ ಬ್ರಿಟಿಷ್ ಜಲಾಂತರ್ಗಾಮಿಯು ಯಾವುದೇ ಸುಳಿವಿಲ್ಲದೆ ಇದ್ದಕ್ಕಿದ್ದಂತೆಯೇ ನಾಪತ್ತೆಯಾಯಿತು. ಮಿಲಿಟರಿ ಅಧಿಕಾರಿಗಳು ಈ ಜಲಾಂತರ್ಗಾಮಿ ಸಾಗರದಾಳದಲ್ಲಿ ಮುಳುಗಿತೆಂದೇ ಭಾವಿಸಿದ್ದರು.
ಇದೀಗ 73 ವರ್ಷಗಳ ತರುವಾಯ ಪತ್ತೆಯಾಗಿರುವ ಈ ಬ್ರಿಟಿಷ್ ಜಲಾಂತರ್ಗಾಮಿಯ ಅವಶೇಷಗಳು ಅಚ್ಚರಿ ಹುಟ್ಟಿಸುವಷ್ಟು ಯಥಾಸ್ಥಿತಿಯಲ್ಲೇ ಇದೆ.
Advertisement