
ಕಠ್ಮಂಡು: ನೇಪಾಳದ 2016 -17 ನೇ ಸಾಲಿನ ಬಜೆಟ್ ನ ಪ್ರಮುಖಾಂಶಗಳು ಬಜೆಟ್ ಮಂಡನೆಯಾಗುವುದಕ್ಕೆ ಮುನ್ನವೇ ಸೋರಿಕೆಯಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ನೇಪಾಳ ಕಾಂಗ್ರೆಸ್ ಸಂಸತ್ ನಲ್ಲಿ ಪ್ರತಿಭಟನೆ ನಡೆಸಿದೆ.
ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನೇಪಾಳ ಸ್ಪೀಕರ್ ಸಂಸತ್ ಅಧಿವೇಶನವನ್ನು ಮುಂದೂಡಿದ್ದಾರೆ. ಕಾಂಗ್ರೆಸ್ ಸದಸ್ಯರ ಪ್ರತಿಭಟನೆಗೆ ಮದೇಶಿ ಸಮುದಾಯವನ್ನು ಪ್ರತಿನಿಧಿಸುವ ಸದಸ್ಯರೂ ಸಹ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ್ದಾರೆ. ನೇಪಾಳ ಹಣಕಾಸು ಸಚಿವ ಬಿಷ್ಣು ಪೌದೆಲ್ ಮೇ.28 ರಂದು 2016 -17 ನೇ ಸಾಲಿನ ಬಜೆಟ್ ಮಂಡಿಸಿದ್ದು, ಬಜೆಟ್ ಗೂ ಮುನ್ನವೇ ಪ್ರಮುಖಾಂಶಗಳು ಸೋರಿಕೆಯಾಗಿದ್ದು ಬಜೆಟ್ ಗಾತ್ರ ಸೇರಿದಂತೆ ಹಲವು ಅಂಶಗಳು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ನೇಪಾಳ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಬಜೆಟ್ ಸೋರಿಕೆಯಾಗಿರುವ ಪ್ರಕರಣದ ಬಗ್ಗೆ ತನಿಖೆ ನಡೆಯಬೇಕು ಹಾಗೂ ನೈತಿಕ ಹೊಣೆ ಹೊತ್ತು ಹಣಕಾಸು ಸಚಿವರು ರಾಜೀನಾಮೆ ನೀಡಬೇಕು ಎಂದು ನೇಪಾಳ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ರಾಮ್ ಶರಣ್ ಮಹಾತ್ ಆಗ್ರಹಿಸಿದ್ದು ತನಿಖೆಗೆ ಆದೇಶಿಸುವ ವರೆಗೆ ಸಂಸತ್ ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
Advertisement