ಜುಬಾ: ದಕ್ಷಿಣ ಸುಡಾನ್ ನ ರಾಜಧಾನಿ ಜುಬಾದ ಬಾರ್ ವೊಂದರಲ್ಲಿ ಅಪರಿಚಿತ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ ಎಂಟು ಫುಟ್ಬಾಲ್ ಅಭಿಮಾನಿಗಳು ಮೃತಪಟ್ಟಿದ್ದಾರೆ.
ವಾರಂತ್ಯದಲ್ಲಿ ಎಂಟು ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಸೋಮವಾರ ಸಹಾಯಕ ಮಾಹಿತಿ ಸಚಿವ ಪೌಲ್ ಅಕೋಲ್ ಕೊರ್ದಿತ್ ಅವರು ಹೇಳಿದ್ದಾರೆ. ಅಲ್ಲದೆ ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಬಾರ್ ವೊಂದರಲ್ಲಿ ಫುಟ್ಬಾಲ್ ಅಭಿಮಾನಿಗಳು ಇಂಗ್ಲಿಷ್ ಪ್ರೀಮಿಯರ್ ಲೀಗ್ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಬಾರ್ ಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದಾನೆ ಅವರು ಹೇಳಿದ್ದಾರೆ.
ಇದೊಂದು ದುರದೃಷ್ಟಕರ ಘಟನೆಯಾಗಿದ್ದು ಸರ್ಕಾರ ಇದನ್ನು ಖಂಡಿಸುತ್ತದೆ ಎಂದಿರು ಕೊರ್ದಿತ್ ಅವರು, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ.