ನರೇಂದ್ರ ಮೋದಿ
ನರೇಂದ್ರ ಮೋದಿ

ನೋಟುಗಳ ರದ್ದತಿ 'ಬೃಹತ್ ಸ್ವಚ್ಛತಾ ಅಭಿಯಾನ': ನರೇಂದ್ರ ಮೋದಿ

ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದು, 500, 1000 ರೂ ಮುಖಬೆಲೆಯ ನೋಟುಗಳ ರದ್ದತಿ ಸ್ವಚ್ಛ ಭಾರತ ಅಭಿಯಾನದ ಮಹತ್ವದ ಭಾಗ ಎಂದು ಹೇಳಿದ್ದಾರೆ.
Published on
ನವದೆಹಲಿ: ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದು, 500, 1000 ರೂ ಮುಖಬೆಲೆಯ ನೋಟುಗಳ ರದ್ದತಿ ಸ್ವಚ್ಛ ಭಾರತ ಅಭಿಯಾನದ ಮಹತ್ವದ ಭಾಗ ಎಂದು ಹೇಳಿದ್ದಾರೆ. 
500, 1000 ರೂ ನೋಟುಗಳನ್ನು ರದ್ದುಗೊಳಿಸಿದ್ದರಿಂದ ಉಂಟಾಗುತ್ತಿರುವ ಅನಾನುಕೂಲವನ್ನು ಲೆಕ್ಕಿಸದೆ ದೇಶದ ಜನತೆ ನೋಟುಗಳ ನಿಷೇಧವನ್ನು ಬೆಂಬಲಿಸುತ್ತಿರುವುದು ಹೆಮ್ಮೆಯ ಸಂಗತಿ, ಲೂಟಿ ಮಾಡಲಾಗಿರುವ ಹಣವನ್ನು ವಾಪಸ್ ಪಡೆಯಲೇಬೇಕಾಗಿದೆ. ನಿಯಮಗಳು ಎಲ್ಲರಿಗೂ ಒಂದೇ ರೀತಿಯಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎರಡು ಮುಖಬೆಲೆಯ ನೋಟುಗಳ ನಿಷೇಧ ರಾತ್ರೋರಾತ್ರಿ ಕೈಗೊಂಡ ನಿರ್ಧಾರವಲ್ಲ. ಜನರಿಗೆ ಉಂಟಾಗುವ ಸಂಕಷ್ಟವನ್ನು ಹೇಗೆ ಕಡಿಮೆಗೊಳಿಸುವುದು ಎಂಬುದರ ಬಗ್ಗೆ ಹಲವು ಗಂಟೆಗಳು ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಲಾಯಿತು ಎಂದು ಮೋದಿ ತಿಳಿಸಿದ್ದಾರೆ. 
ಕೇಂದ್ರ ಸರ್ಕಾರ 2 ವರೆ ಲಕ್ಷದ ವರೆಗೆ ಬ್ಯಾಂಕ್ ನಲ್ಲಿ ಹಣ ಜಮಾ ಮಾಡುವವರನ್ನು ಹಣದ ಮೂಲ ಕೇಳದೇ ಇರಲು ತೀರ್ಮಾನ ಕೈಗೊಂಡಿದೆ. ಪರಿಣಾಮವಾಗಿ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಟ್ಟಿರುವವರ ಮಕ್ಕಳು ತಂದೆ-ತಾಯಂದಿರ ಹೆಸರಿನಲ್ಲಿ 2 ವರೆ ಲಕ್ಷದ ವರೆಗೆ ಬ್ಯಾಂಕ್ ನಲ್ಲಿ ಹಣ ಜಮಾ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲಘು ಧಾಟಿಯಲ್ಲಿ ಹೇಳಿದ್ದಾರೆ. 
ದೇಶದ ನಾಗರಿಕರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯವಿರುವ ಎಲ್ಲವನ್ನೂ ಕೇಂದ್ರ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿರುವ ಪ್ರಧಾನಿ, "ಕೇಂದ್ರ ಸರ್ಕಾರದ ಕ್ರಮಕ್ಕೆ ಬೆಂಬಲ ನೀಡುತ್ತಿರುವ ದೇಶದ ಜನರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಹಲವು ಕುಟುಂಬಗಳು ಮದುವೆ ಸಮಾರಂಭ ನಡೆಸುತ್ತಿದ್ದವು, ಮತ್ತೆ ಹಲವು ಕುಟುಂಬಗಳ ಸದಸ್ಯರು ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದವು. ಹೌದು, ಸರ್ಕಾರದ ನಿರ್ಧಾರದಿಂದ  ಅವರಿಗೆಲ್ಲ ಸಮಸ್ಯೆ ಉಂಟಾಗಿದೆ. ಅನಾನುಕೂಲತೆ ನಡುವೆಯೂ ಸರ್ಕಾರದ ಕ್ರಮವನ್ನು ಒಪ್ಪಿದ ಜನತೆಗೆ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com