ಇಸ್ಲಮಾಬಾದ್: ದೇಶದಾದ್ಯಂತ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿವೆ ಎಂದು ದೂರಿ ಪಾಕಿಸ್ತಾನ ಸರ್ಕಾರ ಮತ್ತೆ ಎರಡು ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಮಾತ್-ಉಲ್-ಅಹ್ರಾರ್ ಮತ್ತು ಲಷ್ಕರ್-ಇ-ಜಂಗ್ವಿ ಅಲ್-ಅಮಾನಿ ಈಗ ನಿಷೇಧವಾಗಿರುವ ಸಂಘಟನೆಗಳು ಎಂದು ಡಾನ್ ವರದಿ ಮಾಡಿದೆ.
ಇದನ್ನು ಧೃಢೀಕರಿಸಿರುವ ಆಂತರಿಕ ಸಚಿವಾಲಯದ ವಕ್ತಾರ, ಕೆಲವು ದಿನಗಳ ಹಿಂದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನ್ಯಾಷನಲ್ ಕೌಂಟರ್ ಟೆರ್ರರಿಸಂ ಅಥಾರಿಟಿ ಅಂತರ್ಜಾಲ ತಾಣದಲ್ಲಿ ನಿಷೇಧಗೊಂಡಿರುವ ಎಲ್ಲ ಸಂಘಟನೆಗಳ ಪಟ್ಟಿಯನ್ನು ನವೀಕರಿಸಲಾಗಿದ್ದು "ನವೆಂಬರ್ ೧೧ ರಂದು ಈ ಪಟ್ಟಿಗೆ ಇನ್ನೆರಡು ಸಂಘಟನೆಗಳನ್ನು ಸೇರಿಸಲಾಗಿದೆ" ಎಂದು ಸಿಂಧ್ ಭದ್ರತಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಅಂತರ್ಜಾಲ ತಾಣದ ಪ್ರಕಾರ ಇಲ್ಲಿಯವರೆಗೂ ೬೩ ಸಂಘಟನೆಗಳನ್ನು ನಿಷೇಧಿಸಲಾಗಿದೆ.