ಹಾಂಗ್ ಝೌ: ಬ್ರಿಟನ್ ನ ನೂತನ ಪ್ರಧಾನಿ ತೆರೆಸಾ ಮೆ ಅವರನ್ನು ಸೋಮವಾರ ಮೊದಲ ಬಾರಿಗೆ ಭೇಟಿ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುರೋಪಿಯನ್ ಒಕ್ಕೂಟದಿಂದ ಹೊರಬಂದ ಇಂಗ್ಲೆಂಡ್ ಜೊತೆ ದ್ವಿಪಕ್ಷೀಯ ಸಂಬಂಧ ವಿಸ್ತರಣೆ ಕುರಿತು ಚರ್ಚೆ ನಡೆಸಿದರು.
ಇಬ್ಬರೂ ನಾಯಕರು ಜಿ20 ಶೃಂಗಸಭೆಯ ಹೊರಗೆ ಮಾತುಕತೆ ನಡೆಸಿ ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಇಂಗ್ಲೆಂಡ್ ಮತ ಚಲಾಯಿಸಿದ ನಂತರ ಅವಕಾಶಗಳ ಬಲವರ್ಧನೆ ಕುರಿತು ಚರ್ಚೆ ನಡೆಸಿದರು.
ಇಂಗ್ಲೆಂಡ್ ಜೊತೆಗೆ ಅವಕಾಶಗಳನ್ನು ಹೆಚ್ಚಿಸಿಕೊಳ್ಳುವ ಕುರಿತು ಚರ್ಚೆ ನಡೆಸಿದೆವು. ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಸಲ ಬ್ರಿಟನ್ ಪ್ರಧಾನಿ ತೆರೆಸಾ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ಬಲವರ್ಧನೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ತೆರೆಸಾ ಮೆ ಬ್ರಿಟನ್ ನ ನೂತನ ಪ್ರಧಾನ ಮಂತ್ರಿಯಾಗಿ ಜುಲೈ 13ರಂದು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸಿದ ನಂತರ ಪ್ರಧಾನ ಮಂತ್ರಿ ಸ್ಥಾನಕ್ಕೆ ಡೇವಿಡ್ ಕ್ಯಾಮರನ್ ರಾಜೀನಾಮೆ ನೀಡಿದ ನಂತರ ತೆರೆಸಾ ಅಧಿಕಾರ ಸ್ವೀಕರಿಸಿದ್ದಾರೆ. ಮಾರ್ಗರೇಟ್ ತ್ಯಾಚರ್ ನಂತರ ತೆರೆಸಾ ಮೆ ಅಧಿಕಾರ ವಹಿಸಿಕೊಂಡಿದ್ದಾರೆ.
ಜುಲೈ 27ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ತೆರೆಸಾ ಮೆಯವರಿಗೆ ಮೋದಿ ಧನ್ಯವಾದ ಹೇಳಿದರು. ಅಲ್ಲದೆ ದ್ವಿಪಕ್ಷೀಯ ಸಹಭಾಗಿತ್ವ ಕಾರ್ಯತಂತ್ರವನ್ನು ಬಲಪಡಿಸಲು ಭಾರತ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.
ಇದಕ್ಕೂ ಮುನ್ನ ದೂರವಾಣಿ ಸಂಭಾಷಣೆಯಲ್ಲಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ ಇಂಗ್ಲೆಂಡ್ ಪ್ರಧಾನಿ, ಭಾರತದ ಜೊತೆಗೆ ಸಂಬಂಧ ಗಟ್ಟಿಗೊಳಿಸಲು ಇಂಗ್ಲೆಂಡ್ ಬಯಸುತ್ತದೆ ಎಂದು ಹೇಳಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಪರಿಣಾಮಕಾರಿ ಆರ್ಥಿಕ ಆಡಳಿತ ನಡೆಸಲು ಭ್ರಷ್ಟಾಚಾರ ವಿರುದ್ಧ ಹೋರಾಡುವುದು, ಕಪ್ಪು ಹಣ ಮತ್ತು ತೆರಿಗೆ ವಂಚನೆಗೆ ಕಡಿವಾಣ ಹಾಕುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.