ವಾಶಿಂಗ್ಟನ್: ಉತ್ತರ ಕೊರಿಯಾ ಇತ್ತೀಚೆಗಷ್ಟೇ ಐದನೇ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿರುವ ಹಿನ್ನಲೆಯಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಗಂಭೀರ ಪರಿಣಾಮಗಳ ಎಚ್ಚರಿಕೆ ನೀಡಿದ್ದಾರೆ.
ಈ ಪರಮಾಣು ಪರೀಕ್ಷೆ ಪ್ರಚೋದನೆ ಎಂದು ಕರೆದಿರುವ ಒಬಾಮಾ, ಏಶಿಯಾ ಮತ್ತು ವಿಶ್ವದಾದ್ಯಂತ ತಮ್ಮ ಮಿತ್ರ ದೇಶಗಳ ಭದ್ರತೆಗೆ ಅಮೆರಿಕಾ ಬದ್ಧವಾಗಿದೆ ಎಂದು ಮತ್ತೆ ಹೇಳಿದ್ದಾರೆ ಎಂದು ಶ್ವೇತ ಭವನದ ಹೇಳಿಕೆಯನ್ನು ಮಾಧ್ಯಮವೊಂದು ವರದಿ ಮಾಡಿದೆ.
ಉತ್ತರ ಕೊರಿಯಾದಲ್ಲಿ ಪರಮಾಣು ಪರೀಕ್ಷೆಯಿಂದ ಉಂಟಾದ ಕೃತಕ ಭೂಕಂಪನದ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಸೂಸನ್ ರೈಸ್ ಬ್ರಿಫೆಡ್ ನಿಂದ ಮಾಹಿತಿ ಪಡೆದ ನಂತರ, ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಜಿಯುನ್-ಹೇ ಮತ್ತು ಜಪಾನ್ ಪ್ರಧಾನಿ ಶಿಸ್ನೋ ಅಬೆ ಜೊತೆಗೂ ದೂರವಾಣಿಯಲ್ಲಿ ಒಬಾಮಾ ಮಾತನಾಡಿದ್ದಾರೆ.
ಉತ್ತರ ಕೊರಿಯಾದ ಪ್ರಮುಖ ಪರಮಾಣು ಪರೀಕ್ಷಾ ಕೇಂದ್ರವಾದ ಪುಂಗ್ಯೆ-ರೀ ಬಳಿ ಸುಮಾರು ಬೆಳಗ್ಗೆ 9:30 ಕ್ಕೆ 5 ಅಂಶದ ತೀವ್ರತೆಯ ಕೃತಕ ಭೂಕಂಪನದ ಪತ್ತೆ ಹಚ್ಚಲಾಗಿತ್ತು. ಅಮೆರಿಕಾದ ಭೊನೈಸರ್ಗಿಕ ಸಮೀಕ್ಷಾ ಸಂಸ್ಥೆ 5.3 ತೀವ್ರತೆಯ ಭೂಕಂಪವಾಗಿರುವುದಾಗಿ ತಿಳಿಸಿದೆ.
ಉತ್ತರ ಕೊರಿಯಾದ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಒಬಾಮಾ ಮುಂದಿನ ದಿನಗಳಲ್ಲಿ ಮೈತ್ರಿ ದೇಶಗಳ ಜಿತೆಗೆ ಮಾತುಕತೆ ಮುಂದುವರೆಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಯಾವುದೇ ಪರಮಾಣು ಅಥವಾ ಕ್ಷಿಪಣಿ ಪರೀಕ್ಷೆ ನಡೆಸದಂತೆ ಉತ್ತರ ಕೊರಿಯಾಗೆ ವಿಶ್ವಸಂಸ್ಥೆ ನಿರ್ಬಂಧ ಹೇರಿದೆ. ಹೀಗಿದ್ದರೂ ಕಳೆದ ಜನವರಿಯಲ್ಲಿ ಉತ್ತರ ಕೊರಿಯಾ ನಾಲ್ಕನೇ ಪರಮಾಣು ಪರೀಕ್ಷೆಯನ್ನು ನಡೆಸಿತ್ತು.