ಜಿನಿವಾ: ಬಲೋಚಿಸ್ತಾನ ವಿಷಯಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನವನ್ನು ಮೂಲೆಗುಂಪು ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಡೆಸುತ್ತಿರುವ ಪ್ರಯತ್ನಕ್ಕೆ ಉತ್ತಮ ಫಲ ಸಿಗುವ ಲಕ್ಷಣ ಕಾಣುತ್ತಿದೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ ಯುರೋಪಿಯನ್ ಸಂಸತ್ತಿನ ಉಪಾಧ್ಯಕ್ಷ ರೈಸ್ಜಾರ್ದ್ ಕ್ಸರ್ಲೆಕಿ, ಬಲೋಚಿಸ್ತಾನ ವಿವಾದಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನಕ್ಕೆ ಪ್ರಬಲ ಸಂದೇಶ ಕಳುಹಿಸಿದ್ದಾರೆ.
ಬಲೋಚಿಸ್ತಾನದಲ್ಲಿ ಮೃತಪಟ್ಟವರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಲೋಚಿಸ್ತಾನದ ಜನರ ಮೇಲೆ ದೌರ್ಜನ್ಯ ನಿಲ್ಲಿಸದಿದ್ದರೆ ಪಾಕಿಸ್ತಾನದ ಮೇಲೆ ಆರ್ಥಿಕ ಮತ್ತು ರಾಜಕೀಯ ನಿರ್ಬಂಧ ಹೇರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನ್ಯೂಯಾರ್ಕ್ ಸಿಟಿಯ ಕಚೇರಿಯಲ್ಲಿ ಮೊನ್ನೆ ಬುಧವಾರ ಬಲೋಚಿಯನ್ನರು ಮತ್ತು ಭಾರತೀಯರು ಪಾಕಿಸ್ತಾನ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಯುರೋಪಿಯನ್ ಒಕ್ಕೂಟದ ಹೇಳಿಕೆ ಬಂದಿದೆ.
ಬಲೋಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉಲ್ಲೇಖಿಸಿದ ನಂತರ ಗಡಿಪಾರುಗೊಂಡು ಬದುಕುತ್ತಿರುವ ಅನೇಕ ಬಲೋಚ್ ನಾಯಕರು, ಪಾಕಿಸ್ತಾನದ ಬಂಧನದಿಂದ ಮುಕ್ತವಾಗಿ ಸ್ವತಂತ್ರವಾಗಿ ಬದುಕಲು ಹುರುಪು ಮತ್ತು ಉತ್ಸಾಹದಿಂದ ಒತ್ತಾಯಿಸುತ್ತಿದ್ದಾರೆ.