ದಮಾಸ್ಕಸ್: ಸಿರಿಯಾದಲ್ಲಿ ಪ್ರತಿಗಾಮಿಗಳ ವಶದಲ್ಲಿರುವ ಪಟ್ಟಣದ ಮೇಲೆ ನಡೆದ ಶಂಕಿತ ರಾಸಾಯನಿಕ ಬಾಂಬ್ ದಾಳಿಯಲ್ಲಿ ೧೧ ಮಕ್ಕಳು ಸೇರಿದಂತೆ ಕನಿಷ್ಠ ೫೮ ಜನ ಮೃತಪಟ್ಟಿದ್ದಾರೆ ಎಂದು ವಾರ್ ಮಾನಿಟರ್ ಹೇಳಿದೆ.
ಸಿರಿಯಾ ಮಾನವಹಕ್ಕುಗಳ ಪರಿವೀಕ್ಷಣಾ ಸಂಸ್ಥೆ (ಎಸ್ ಒ ಎಚ್ ಆರ್) ತಿಳಿಸಿರುವಂತೆ ಇಡ್ಲಿಬ್ ಪ್ರಾಂತ್ಯದ ಖಾನ್ ಶಿಕೌನ್ ಪಟ್ಟಣದ ಮೇಲೆ ಈ ದಾಳಿ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ವೈದ್ಯಕೀಯ ತಂಡಗಳ ಪ್ರಕಾರ ಸಂತ್ರಸ್ತರಲ್ಲಿ ಉಸಿರಾಟದ ತೊಂದರೆ ಕಂಡು ಬಂತು ಎಂದು ತಿಳಿಯಲಾಗಿದೆ.
ಈಮಧ್ಯೆ ಈ ದಾಳಿಯಲ್ಲಿ ೧೦೦ ಜನರು ಹತ್ಯೆಯಾಗಿದ್ದಾರೆ ಎಂದು ಸಿರಿಯಾದ ವಿರೋಧ ಪಕ್ಷಗಳ ಹೈ ನೆಗೋಷಿಯೇಷನ್ಸ್ ಕಮಿಟಿ ಟ್ವಿಟ್ಟರ್ ನಲ್ಲಿ ಹೇಳಿದೆ. ಈ ದಾಳಿ ಮಾಡಿದ ವಿಮಾನಗಳು ಸಿರಿಯಾನವೋ ಅಥವಾ ರಷ್ಯಾ ದೇಶದ ಮೈತ್ರಿ ದೇಶಗಳವೋ ಎಂದು ಸ್ಪಷ್ಟವಾಗಿಲ್ಲ.
ಮಂಗಳವಾರ ಫೇಸ್ಬುಕ್ ಪೋಸ್ಟ್ ಒಂದರ ಪ್ರಕಾರ, ಕ್ಲೋರಿನ್ ಅನಿಲ ಹೊಂದಿದ್ದ ಥರ್ಮೋಬಾರೀಕ್ ಬಾಂಬ್ ಗಳನ್ನು ದಾಳಿಗೆ ಬಳಸಲಾಗಿದೆ ಎಂದಿತ್ತು.
ಯುರೋಪಿಯನ್ ಯೂನಿಯನ್ ಮತ್ತು ವಿಶ್ವ ಸಂಸ್ಥೆ ಸಿರಿಯಾದ ಭವಿಷ್ಯದ ಬಗ್ಗೆ ಚರ್ಚಿಸಲು ಬ್ರಸಲ್ಸ್ ನಲ್ಲಿ ಎರಡು ದಿನಗಳ ಸಮಾವೇಶ ಆಯೋಜಿಸಿರುವ ಬೆನ್ನಲ್ಲೇ ಈ ರಸಾಯನಿಕ ಬಾಂಬ್ ದಾಳಿ ನಡೆದಿದೆ.