ಇಸ್ಲಾಮಾಬಾದ್: ನಮ್ಮ ಶಸ್ತ್ರಸಜ್ಜಿದ ಸೇನಾ ಪಡೆಗಳು ಯಾವುದೇ ರೀತಿಯ ಬೆದರಿಕೆಗೆ ಪ್ರತಿಕ್ರಿಯಿಸಲು ಸಂಪೂರ್ಣ ಸಾಮರ್ಥ್ಯ ಹೊಂದಿದ್ದು, ಯಾವುದೆ ಸವಾಲು ಎದುರಿಸಲು ಸಿದ್ಧವಾಗಿವೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಪಾಕ್ ಸೇನೆ ಭಾರತೀಯ ನಾಗರಿಕನಿಗೆ ಗಲ್ಲು ಶಿಕ್ಷೆ ಪ್ರಕಟಿಸಿದ ಮರುದಿನವೇ ಹೇಳಿದ್ದಾರೆ.
ಇಂದು ಪಾಕಿಸ್ತಾನ ವಾಯುಪಡೆ ಅಕಾಡೆಮಿಯಲ್ಲಿ ಪಾಸಿಂಗ್ ಔಟ್ ಪರೇಡ್ ನಲ್ಲಿ ಭಾಗವಹಿಸಿ ಮಾತನಾಡಿದ ಪಾಕ್ ಪ್ರಧಾನಿ, ಪಾಕಿಸ್ತಾನ ಶಾಂತಿ-ಪ್ರೀತಿಯ ದೇಶ. ಆದರೆ ಇದೇ ನಮ್ಮ ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ಎಲ್ಲಾ ದೇಶಗಳೊಂದಿಗೆ, ವಿಶೇಷವಾಗಿ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಪರಸ್ಪರ ಸಂಘರ್ಷದ ಬದಲಿಗೆ ಸಹಕಾರ ನೀಡುವುದು ಪಾಕಿಸ್ತಾನದ ನೀತಿ ಎಂದು ನವಾಜ್ ಷರೀಫ್ ಹೇಳಿದ್ದಾರೆ.
ನಿನ್ನೆಯಷ್ಟೆ ಪಾಕಿಸ್ತಾನ ಸೇನಾ ಕೋರ್ಟ್, ಗೂಢಚಾರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಇದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಅಲ್ಲದೆ ಇದೊಂದು ಪೂರ್ವ ಯೋಜಿತ ಕೊಲೆ ಎಂದಿದೆ.