ಮುಂಬೈ ದಾಳಿ ರೂವಾರಿ ಹಫೀಸ್ ಸಯೀದ್ ನ ಗೃಹ ಬಂಧನ ವಿಸ್ತರಿಸಿದ ಪಾಕಿಸ್ತಾನ

ಮುಂಬೈ ದಾಳಿಯ ರೂವಾರಿ ಮತ್ತು ಜಮಾತ್ -ಉದ್-ದವಾಹ್ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಆತನ...
ಹಫೀಸ್ ಸಯೀದ್
ಹಫೀಸ್ ಸಯೀದ್
ಲಾಹೋರ್: ಮುಂಬೈ ದಾಳಿಯ ರೂವಾರಿ ಮತ್ತು ಜಮಾತ್ -ಉದ್-ದವಾಹ್ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಆತನ ಸಹಚರರ  ಗೃಹ ಬಂಧನದ ಮೂರು ತಿಂಗಳ ಅವಧಿ ಇಂದಿಗೆ ಮುಗಿದಿದ್ದರೂ ಕೂಡ ಅದು 90 ದಿನಗಳು ಮತ್ತೆ ವಿಸ್ತರಣೆಯಾಗಿದೆ.
ಸಯೀದ್ ಮತ್ತು ಆತನ ನಾಲ್ವರು ಸಹಚರರ ಗೃಹ ಬಂಧನದ ಅವಧಿಯನ್ನು ದೇಶದ ಭಯೋತ್ಪಾದಕ ವಿರೋಧಿ ಕಾಯ್ದೆಯಡಿ ವಿಸ್ತರಣೆ ಮಾಡಲು ಪಾಕಿಸ್ತಾನದ ಪಂಜಾಬ್ ಸರ್ಕಾರ ನಿರ್ಧರಿಸಿದ್ದು ಈ ಸಂಬಂಧ ಸದ್ಯದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಪಂಜಾಬ್ ಸರ್ಕಾರದ ಗೃಹ ಇಲಾಖೆಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹಫೀಸ್ ಸಯೀದ್, ಪ್ರೊ. ಮಲಿಕ್ ಝಫರ್ ಇಕ್ಬಾಲ್, ಅಬ್ದುರ್ ರೆಹಮಾನ್ ಅಬಿದ್, ಖಾಝಿ ಕಶಿಫ್ ಹುಸೇನ್ ಮತ್ತು ಅಬ್ದುಲ್ಲಾ ಉಬೇದ್ ಅವರ ಗೃಹ ಬಂಧನವನ್ನು ಇನ್ನು 90 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಸಯೀದ್ ಬಂಧನ ಕುರಿತು ಸಮಾಲೋಚನಾ ಸಭೆಯನ್ನು ಆಂತರಿಕ ಸಚಿವ ಚೌಧರಿ ನಿಸಾರ್ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು ಅದರಲ್ಲಿ ಗೃಹ ಬಂಧನದ ಅವಧಿಯನ್ನು ವಿಸ್ತರಿಸುವ ಕುರಿತು ತೀರ್ಮಾನಿಸಲಾಯಿತು ಎಂದು ಹೇಳಿದರು.
ಜಮಾತ್ ಉದ್ ದವಾ ಮತ್ತು ಅದರ ಮುಖ್ಯಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಅಮೆರಿಕಾದಲ್ಲಿ ಡೊನಾಲ್ಡ್  ಟ್ರಂಪ್ ಸರ್ಕಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ ಪಂಜಾಬ್ ಸರ್ಕಾರ ಜನವರಿ 30ರಂದು ಸಯೀದ್ ಮತ್ತು ಆತನ ಸಹಚರರನ್ನು ಬಂಧನದಲ್ಲಿರಿಸಿತ್ತು ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಕಳೆದ ಜನವರಿ 30ರಂದು ಈ ಐವರನ್ನು ಲಾಹೋರ್ ನಲ್ಲಿ ಶಾಂತಿ ಮತ್ತು ಭದ್ರತೆಗೆ ಹಾನಿಯನ್ನುಂಟುಮಾಡುವ ಚಟುವಟಿಕೆಗಳಲ್ಲಿ ಭಾಗಿಯಾದ ಸಂಶಯದ ಮೇಲೆ ಗೃಹ ಬಂಧನದಲ್ಲಿ ಇರಿಸಿತ್ತು.
ಸರಿಯಾದ ಕಾನೂನು ಸಮರ್ಥನೆ ನೀಡದೆ ಸರ್ಕಾರ ತಮ್ಮನ್ನು ಬಂಧಿಸಿದೆ ಎಂದು ಸಯೀದ್ ಮತ್ತು ಆತನ ಸಹಚರರು ಆರೋಪಿಸಿದ್ದರು. 
2008ರ ಮುಂಬೈ ಭಯೋತ್ಪಾದಕ ದಾಳಿ ನಂತರ ಸಯೀದ್ ನನ್ನು ಬಂಧಿಸಲಾಗಿತ್ತು. ಆದರೆ 200ರಲ್ಲಿ ಬಿಡುಗಡೆ ಮಾಡಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com