ನವಾಜ್ ಷರೀಫ್ ಬದಲಿಗೆ ಪಕ್ಷಕ್ಕೆ ನೂತನ ಅಧ್ಯಕ್ಷರ ನೇಮಕ ಮಾಡಿ: ಪಾಕ್ ಚುನಾವಣಾ ಆಯೋಗ

ಪಾಕಿಸ್ತಾನ ಚುನಾವಣಾ ಆಯೋಗ ಆಡಳಿತರೂಢ ಪಿಎಂಎಲ್-ಎನ್ ಗೆ ಮಂಗಳವಾರ ನೋಟಿಸ್ ನೀಡಿದ್ದು, ಮಾಜಿ ಪ್ರಧಾನಿ ನವಾಜ್....
ನವಾಜ್ ಷರೀಫ್
ನವಾಜ್ ಷರೀಫ್
ಇಸ್ಲಾಮಾಬಾದ್: ಪಾಕಿಸ್ತಾನ ಚುನಾವಣಾ ಆಯೋಗ ಆಡಳಿತರೂಢ ಪಿಎಂಎಲ್-ಎನ್ ಗೆ ಮಂಗಳವಾರ ನೋಟಿಸ್ ನೀಡಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ ಪಕ್ಷಕ್ಕೆ ನೂತನ ಮುಖ್ಯಸ್ಥರನ್ನು ನೇಮಕ ಮಾಡುವಂತೆ ಸೂಚಿಸಿದೆ.
ಪನಾಮಾ ಪೇಪರ್ಸ್‌ ಪ್ರಕರಣದಲ್ಲಿ ತಪ್ಪಿತಸ್ಥರಾಗಿ ಸುಪ್ರೀಂ ಕೋರ್ಟ್ ನಿಂದ ಅನರ್ಹಗೊಂಡಿರುವ ನವಾಜ್ ಷರೀಫ್ ಅವರು ಕಳೆದ ಜುಲೈ 28ರಂದು ಪಾಕ್ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷರಾಗಿ ಮುಂದುವರೆದಿದ್ದರು. 
ರಾಜಕೀಯ ಪಕ್ಷಗಳ ಆದೇಶ 2002ರ ಪ್ರಕಾರ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ನವಾಜ್ ಷರೀಫ್ ಅವರು ಪಕ್ಷದ ಮುಖ್ಯಸ್ಥರಾಗಿ ಮುಂದುವರೆಯುವಂತಿಲ್ಲ. ಹೀಗಾಗಿ ಈ ಕೂಡಲೇ ಪಕ್ಷಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಚುನಾವಣಾ ಆಯೋಗ ಇಂದು ಪಿಎಂಎಲ್-ಎನ್ ಪಕ್ಷಕ್ಕೆ ಸೂಚಿಸಿದೆ. 
ಒಂದು ವಾರದೊಳಗೆ ಪಕ್ಷಕ್ಕೆ ನೂತನ ಮುಖ್ಯಸ್ಥರನ್ನು ನೇಮಕ ಮಾಡುವಂತೆ ಗಡುವು ನೀಡಿರುವ ಪಾಕ್ ಚುನಾವಣಾ ಆಯೋಗ, ನೂತನ ಅಧ್ಯಕ್ಷರು ನೇಮಕಗೊಂಡ ನಂತರ ತನಗೆ ಮಾಹಿತಿ ನೀಡುವಂತೆ ಆದೇಶಿಸಿದೆ.
ವರದಿಗಳ ಪ್ರಕಾರ, ನವಾಜ್ ಷರೀಫ್ ಅವರ ಸಹೋದರ ಶೆಭಜ್ ಷರೀಫ್ ಅಥವಾ ಮಾಜಿ ಪ್ರಧಾನಿಯ ಪತ್ನಿ ಕುಲ್ಸುಮ್ ನವಾಜ್ ಅವರು ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com