ಇಸ್ಲಾಮಾಬಾದ್: ಕಾಶ್ಮೀರ ಪಾಕಿಸ್ತಾನದ ಅವಿಭಾಜ್ಯ ಅಂಗವಾಗಿದೆ ಎಂದಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು, ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಬುರ್ಹಾನ್ ವನಿಯನ್ನು ಮತ್ತೆ ಹಾಡಿ ಹೊಗಳುವ ಮೂಲಕ ಭಾರತವನ್ನು ಕೆಣಕಿದ್ದಾರೆ.
ಕಾಶ್ಮೀರ ಕುರಿತ ಎರಡು ದಿನಗಳ ಅಂತರಾಷ್ಟ್ರೀಯ ಸಂಸದೀಯ ಸೆಮಿನಾರ್ ಉದ್ಘಾಟಿಸಿ ಮಾತನಾಡಿದ ನವಾಜ್ ಷರೀಫ್ ಅವರು, ಹತ್ಯೆಯಾದ ಉಗ್ರ ಬುರ್ಹಾನ್ ವನಿ ಒಬ್ಬ ರೋಮಾಂಚಕ ಮತ್ತು ವರ್ಚಸ್ವಿ ನಾಯಕರಾಗಿದ್ದರು ಮತ್ತು ಕಾಶ್ಮೀರಿ ಚಳುವಳಿಗೆ ಹೊಸ ತಿರುವು ನೀಡಿದ್ದರು ಎಂದು ಹೊಗಳಿದ್ದಾರೆ.
ಸ್ವಯಂ ನಿರ್ಧಾರದ ಹಕ್ಕಿಗಾಗಿ ಕಾಶ್ಮೀರ ಜನತೆ ನಡೆಸುತ್ತಿರುವ ಹೋರಾಟವನ್ನು ಶ್ಲಾಘಿಸಿದ ಪಾಕ್ ಪ್ರಧಾನಿ, ಕಾಶ್ಮೀರಿ ಜನತೆಗಾಗಿ ನಮ್ಮ ಹೃದಯ ಮೀಡಿಯುತ್ತದೆ ಎಂದು ಹೇಳಿರುವುದಾಗಿ ಪಾಕ್ ರೇಡಿಯೋ ವರದಿ ಮಾಡಿದೆ.
ಕಾಶ್ಮೀರ ಪಾಕಿಸ್ತಾನದ ಅವಿಭಾಜ್ಯ ಅಂಗವಾಗಿದ್ದು, ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವಂತೆ ಜಗತ್ತು ಭಾರತಕ್ಕೆ ಹೇಳುವ ಅಗತ್ಯ ಇದೆ ಎಂದಿರುವ ಪಾಕ್ ಪ್ರಧಾನಿ, ಕಾಶ್ಮೀರಿ ಜನತೆಯ ವಿರುದ್ಧದ ಭಾರತದ ಆಕ್ರಮಣ ಶೀಲತೆ ವಿಷಾದಕರ ಎಂದಿದ್ದಾರೆ.