ಮನಾಸಾ ವಿಮಾನ ನಿಲ್ದಾಣ
ವಿದೇಶ
ಕಿರ್ಗಿಸ್ತಾನ: ಸರಕು ವಿಮಾನ ಅಪಘಾತ, ಕನಿಷ್ಠ 32 ಮಂದಿ ಗ್ರಾಮಸ್ಥರು ಸಾವು, ಹಲವರಿಗೆ ಗಾಯ
ಟರ್ಕಿ ದೇಶದ ಸರಕು ವಿಮಾನ ಬಿಶ್ಕೇಕ್ ವಿಮಾನ ನಿಲ್ದಾಣದ ಸಮೀಪ ಹಠಾತ್ ಅಪ್ಪಳಿಸಿದ ಪರಿಣಾಮ ಆರು ಮಂದಿ...
ಕಿರ್ಗಿಸ್ತಾನ್: ಟರ್ಕಿ ದೇಶದ ಸರಕು ವಿಮಾನ ಬಿಶ್ಕೇಕ್ ವಿಮಾನ ನಿಲ್ದಾಣದ ಸಮೀಪ ಹಠಾತ್ ಅಪ್ಪಳಿಸಿದ ಪರಿಣಾಮ ಆರು ಮಂದಿ ಮಕ್ಕಳು ಸೇರಿದಂತೆ 32 ಜನ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಬೋಯಿಂಗ್ 747 ವಿಮಾನ ದಟ್ಟವಾದ ಮಂಜಿನ ವಾತಾವರಣದಲ್ಲಿ ಇಳಿಯಲು ಪ್ರಯತ್ನಿಸಿದ ವೇಳೆ ಜನವಸತಿ ಪ್ರದೇಶದಲ್ಲಿ ಅಪ್ಪಳಿಸಿ ಬಿದ್ದಿದ್ದು ಹಲವಾರು ಮನೆಗಳು ನಾಶವಾಗಿವೆ. ಮೃತಪಟ್ಟವರೆಲ್ಲಾ ಸ್ಥಳೀಯ ಗ್ರಾಮವಾಸಿಗಳಾಗಿದ್ದಾರೆ ಎಂದು ಕಿರ್ಗಿಸ್ತಾನ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಅಧಿಕಾರಿಗಳ ಪ್ರಕಾರ, ವಿಮಾನ ಕಿರ್ಗಿಸ್ತಾನದ ರಾಜಧಾನಿ ಬಿಶ್ಕೇಕ್ ಹತ್ತಿರವಿರುವ ಮನಾಸ್ ಪಟ್ಟಣದಲ್ಲಿ ತಾತ್ಕಾಲಿಕವಾಗಿ ತಂಗಬೇಕಾಗಿತ್ತು. ವಿಮಾನ ಹಾಂಗಾಂಗ್ ನಿಂದ ಇಸ್ತಾನ್ ಬುಲ್ ಗೆ ತೆರಳುತ್ತಿತ್ತು. ಸ್ಥಳೀಯ ಕಾಲಮಾನ ಇಂದು ಬೆಳಗ್ಗೆ 7.31ಕ್ಕೆ ಮನಾಸ್ ನಿಲ್ದಾಣದಲ್ಲಿ ವಿಮಾನ ಕೆಳಗಿಳಿಯುತ್ತಿದ್ದಾಗ ನೆಲಕ್ಕೆ ಅಪ್ಪಳಿಸಿದೆ. ದಟ್ಟ ಮಂಜು ಕವಿದಿದ್ದರಿಂದ ಸರಿಯಾಗಿ ಕಾಣುತ್ತಿರಲಿಲ್ಲ.
ಡೂಮ್ಡ್ ವಿಮಾನ ಹಠಾತ್ತನೆ ನೆಲಕ್ಕಪ್ಪಳಿಸಿದ್ದರಿಂದ ಗ್ರಾಮದ 15 ಮನೆಗಳಿಗೆ ಹಾನಿಯುಂಟಾಗಿದೆ ಎಂದು ತುರ್ತು ಸಚಿವಾಲಯದ ವಿಪತ್ತು ನಿರ್ವಹಣಾ ಕೇಂದ್ರದ ಮುಖ್ಯಸ್ಥ ಮುಖಮ್ಮದ್ ಸ್ವರೊವ್ ಹೇಳಿದ್ದಾರೆ.
ರಕ್ಷಣಾ ಪಡೆ ಸಿಬ್ಬಂದಿ ವ ವಿಮಾನದ ಪೈಲೆಟ್ ಮತ್ತು 15 ಮಂದಿ ಗ್ರಾಮಸ್ಥರ ಶವಗಳನ್ನು ಅವಶೇಷಗಳಡಿಯಿಂದ ಹೊರತೆಗೆದಿದ್ದಾರೆ ಎಂದು ಕಿರ್ಗಿಸ್ತಾನ ಸರ್ಕಾರದ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿಮಾನದಲ್ಲಿದ್ದ ನಾಲ್ವರು ಪೈಲೆಟ್ ಗಳು ಮೃತಪಟ್ಟಿದ್ದು ಒಬ್ಬರ ಮೃತದೇಹ ಇನ್ನೂ ಸಿಕ್ಕಿಲ್ಲ. ವಿಮಾನ ಬಿದ್ದಿದ್ದರಿಂದ 43 ಮನೆಗಳು ಧ್ವಂಸಗೊಂಡಿವೆ. ಒಂದು ಕುಟುಂಬದ ಎಲ್ಲಾ ಸದಸ್ಯರು ಸಾವಿಗೀಡಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ದುರ್ಘಟನೆ ಹಿನ್ನೆಲೆಯಲ್ಲಿ ಮನಾಸಾ ವಿಮಾನ ನಿಲ್ದಾಣವನ್ನು ಇಂದು ಸಂಜೆಯವರೆಗೆ ಮುಚ್ಚಲಾಗಿದೆ. ವಿಮಾನಗಳ ಹಾರಾಟವನ್ನು ಕೂಡ ರದ್ದುಪಡಿಸಲಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ.
ಕಿರ್ಗಿಸ್ತಾನದ ಉಪ ಪ್ರಧಾನಿ ಮೌಖಮ್ಮೆಟ್ಕಲಿ ಅಬೌಲ್ಗಝಿವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರ ಜೊತೆ ಸಾರಿಗೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆ ಖಾತೆ ಸಚಿವರು ಕೂಡ ಇದ್ದರು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಅಪಘಾತ ಹಿನ್ನೆಲೆಯಲ್ಲಿ ಇಂದು ಚೀನಾಕ್ಕೆ ಭೇಟಿ ನೀಡಬೇಕಿದ್ದ ಕಿರ್ಗಿಸ್ತಾನ ಅಧ್ಯಕ್ಷ ಅಲ್ಮಝ್ ಬೇಕ್ ಅಟಂಬಯೆವ್ ಪ್ರಯಾಣವನ್ನು ರದ್ದುಪಡಿಸಿ ದೇಶಕ್ಕೆ ವಾಪಸಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ