ಶೆಭಜ್ ಷರೀಫ್
ವಿದೇಶ
ಪನಾಮ ಪ್ರಕರಣ: ನವಾಜ್ ಷರೀಫ್ ತಪ್ಪಿತಸ್ಥನಾದರೆ ಅವರ ಸಹೋದರನಿಗೆ ಪಾಕ್ ಪ್ರಧಾನಿ ಪಟ್ಟ
ಪನಾಮ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಪಾಕ್ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದರೆ....
ಇಸ್ಲಾಮಾಬಾದ್: ಪನಾಮ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಪಾಕ್ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದರೆ ಅವರ ಸಹೋದರ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶೆಭಜ್ ಷರೀಫ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶೆಭಜ್ ಷರೀಪ್ ಅವರು ಸಂಸತ್ ಸದಸ್ಯರಾಗಿಲ್ಲ. ಹೀಗಾಗಿ ಅವರು ತಕ್ಷಣವೇ ಪಾಕ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಅವಕಾಶವಿಲ್ಲ. ಶೆಭಜ್ ಷರೀಫ್ ಅವರು ಸಂಸತ್ ಸದಸ್ಯರಾಗಿ ಆಯ್ಕೆಯಾಗುವವರೆಗೆ ಸುಮಾರು 45 ದಿನಗಳವರೆಗೆ ರಕ್ಷಣಾ ಸಚಿವ ಖವಾಜ್ ಆಸಿಫ್ ಅವರು ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಜೀಯೋ ನ್ಯೂಸ್ ವರದಿ ಮಾಡಿದೆ.
ನಿನ್ನೆ ನಡೆದ ಪಾಕಿಸ್ತಾನ ಮುಸ್ಲಿಮ್ ಲೀಗ್ ನವಾಜ್(ಪಿಎಂಎಲ್-ಎನ್)ನ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ. ಅಲ್ಲದೆ ಒಂದು ವೇಳೆ ತೀರ್ಪು ಪಾಕ್ ಪ್ರಧಾನಿ ವಿರುದ್ಧ ಬಂದರೆ ಕಾನೂನು ಹೋರಾಟ ಮುಂದುವರೆಸಲು ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವರ ಸಹೋದರ ಶೆಭಜ್ ಷರೀಪ್ ಅವರು ಸಹ ಭಾಗವಹಿಸಿದ್ದರು.
ಪ್ರಧಾನಿ ಷರೀಫ್ ಹಾಗೂ ಕುಟುಂಬ ಭಾರೀ ಪ್ರಮಾಣದ ಭ್ರಷ್ಟಾಚಾರದಲ್ಲಿ ಶಾಮೀಲಾಗಿದೆ ಎಂದು ಮಾಹಿತಿ ಹೊರಹಾಕಿದ್ದ ಪನಾಮಾ ಪೇಪರ್ ಪ್ರಕರಣದ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡ(ಜೆಐಟಿ) ಆರೋಪಿಗಳು ನೀಡಿದ ಕೆಲವು ದಾಖಲೆಗಳನ್ನು ಕೋರ್ಟ್ ಗೆ ನೀಡಿದ್ದು, ಕಳೆದ ಸೋಮವಾರದಿಂದ ಸುಪ್ರೀಂ ಕೋರ್ಟ್ ನಲ್ಲಿ ಸತತ ವಿಚಾರಣೆ ನಡೆಯುತ್ತಿದೆ.
ಪನಾಮಾ ಪೇಪರ್ ತನಿಖಾ ವರದಿಯಲ್ಲಿ, ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರರು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಜಂಟಿ ಸಮಿತಿಯೊಂದನ್ನು ನೇಮಿಸಿ, ಆ ಆರೋಪಗಳ ಕುರಿತಂತೆ ತನಿಖೆ ನಡೆಸಲು ಆದೇಶಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ