ಇಸ್ಲಾಮಾಬಾದ್: ಪನಾಮ ಪೇಪರ್ಸ್ ಲೀಕ್ ಪ್ರಕರಣದಲ್ಲಿ ತಪ್ಪಿತಸ್ಥರಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ನವಾಜ್ ಷರೀಫ್ ಅವರ ಸ್ಥಾನಕ್ಕೆ ಅವರ ಸಹೋದರ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶೆಭಜ್ ಷರೀಫ್ ಅವರು ಆಯ್ಕೆಯಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಂದು ಪಾಕ್ ಸುಪ್ರೀಂ ಕೋರ್ಟ್ ಪನಾಮ ಪೇಪರ್ಸ್ ಲೀಕ್ ಪ್ರಕರಣದಲ್ಲಿ ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸಿದ ನಂತರ ನವಾಜ್ ಷರೀಫ್ ಅವರ ಹಿರಿಯ ಸಹೋದರ ಶೆಭಜ್ ಷರೀಪ್ ಅವರು ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ.
ಇತ್ತೀಚಿಗೆ ನವಾಜ್ ಷರೀಫ್ ನೇತೃತ್ವದಲ್ಲಿ ನಡೆದ ಪಾಕಿಸ್ತಾನ ಮುಸ್ಲಿಮ್ ಲೀಗ್ ನವಾಜ್(ಪಿಎಂಎಲ್-ಎನ್)ನ ಉನ್ನತ ಮಟ್ಟದ ಸಭೆಯಲ್ಲಿಯೇ ಶೆಭಜ್ ಷರೀಫ್ ಅವರನ್ನು ಮುಂದಿನ ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಶೆಭಜ್ ಷರೀಫ್ ಅವರು ಸಂಸತ್ ಸದಸ್ಯರಾಗಿಲ್ಲ. ಹೀಗಾಗಿ ಅವರು ತಕ್ಷಣವೇ ಪಾಕ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಅವಕಾಶವಿಲ್ಲ. ಶೆಭಜ್ ಷರೀಫ್ ಅವರು ಸಂಸತ್ ಸದಸ್ಯರಾಗಿ ಆಯ್ಕೆಯಾಗುವವರೆಗೆ ಸುಮಾರು 45 ದಿನಗಳವರೆಗೆ ರಕ್ಷಣಾ ಸಚಿವ ಖವಾಜ್ ಆಸಿಫ್ ಅವರು ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿರುವ ಶೆಭಜ್ ಷರೀಫ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರೆ, ಅವರ ಪುತ್ರ ಹಮಜ್ ಶೆಭಜ್ ಷರೀಫ್ ಅಥವಾ ಪಂಜಾಬ್ ಪ್ರಾಂತ್ಯದ ಕಾನೂನು ಸಚಿವರಾಗಿರುವ ರಾಣಾ ಸನಾಉಲ್ಲಾ ಅವರನ್ನು ಪಂಜಾಬ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಕ್ರಮ ಆಸ್ತಿ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್ ಷರೀಫ್ ಅವರು ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಈಗಾಗಲೇ ಪ್ರಧಾನಿ ಸ್ಥಾನಕ್ಕೆ ಷರೀಫ್ ರಾಜಿನಾಮೆ ನೀಡಿದ್ದಾರೆ.
ಪನಾಮಾ ಪೇಪರ್ ತನಿಖಾ ವರದಿಯಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರರು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಜಂಟಿ ಸಮಿತಿಯೊಂದನ್ನು ನೇಮಿಸಿ, ಆ ಆರೋಪಗಳ ಕುರಿತಂತೆ ತನಿಖೆ ನಡೆಸಲು ಆದೇಶಿಸಿತ್ತು.