ಇಸ್ಲಾಮಾಬಾದ್: ಪನಾಮ ಪೇಪರ್ಸ್ ಲೀಕ್ ಪ್ರಕರಣದಲ್ಲಿ ತಪ್ಪಿತಸ್ಥರಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ನವಾಜ್ ಷರೀಫ್ ಅವರ ಸ್ಥಾನಕ್ಕೆ ಶಾಹೀದ್ ಖಕನ್ ಅಬ್ಬಾಸಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ.
ನವಾಜ್ ಷರೀಫ್ ಸಹೋದರ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶೆಭಜ್ ಷರೀಫ್ ಅವರು ಪ್ರಧಾನಿಯಾಗುವ ಸಾಧ್ಯತೆ ಇತ್ತು. ಆದರೆ ಶೆಭಜ್ ಷರೀಫ್ ಅವರು ಸಂಸತ್ ಸದಸ್ಯರಾಗಿಲ್ಲದ ಕಾರಣ ಅವರು ಸಂಸತ್ ಸದಸ್ಯರಾಗಿ ಆಯ್ಕೆಯಾಗುವವರೆಗೂ ಶಾಹೀದ್ ಖಕನ್ ಅಬ್ಬಾಸಿ ಅವರು ಪಾಕಿಸ್ತಾನ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅಕ್ರಮ ಆಸ್ತಿ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್ ಷರೀಫ್ ಅವರು ತಪ್ಪಿತಸ್ಥ ಎಂದು ನಿನ್ನೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆ ಪ್ರಧಾನಿ ಸ್ಥಾನಕ್ಕೆ ಷರೀಫ್ ರಾಜಿನಾಮೆ ನೀಡಿದ್ದರು.
ಪನಾಮಾ ಪೇಪರ್ ತನಿಖಾ ವರದಿಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರರು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಜಂಟಿ ಸಮಿತಿಯೊಂದನ್ನು ನೇಮಿಸಿ, ಆ ಆರೋಪಗಳ ಕುರಿತಂತೆ ತನಿಖೆ ನಡೆಸಲು ಆದೇಶಿಸಿತ್ತು.