೧೩ ಜನರನ್ನು ಹತ್ಯೆಗೈದ ತೆಹ್ರಾನ್ ಭಯೋತ್ಪಾದಕ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಪ್ರತಿಕ್ರಿಯೆಗಳನ್ನು ಇರಾನ್ ವಿದೇಶಾಂಗ ಸಚಿವ ಮೊಹಮದ್ ಜವಾದ್ ಜರೀಫ್ ಗುರುವಾರ
ತೆಹ್ರಾನ್: ೧೩ ಜನರನ್ನು ಹತ್ಯೆಗೈದ ತೆಹ್ರಾನ್ ಭಯೋತ್ಪಾದಕ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಪ್ರತಿಕ್ರಿಯೆಗಳನ್ನು ಇರಾನ್ ವಿದೇಶಾಂಗ ಸಚಿವ ಮೊಹಮದ್ ಜವಾದ್ ಜರೀಫ್ ಗುರುವಾರ ತೀವ್ರವಾಗಿ ಖಂಡಿಸಿದ್ದಾರೆ.
"ವಾಕರಿಕೆ ತರುವ ವೈಟ್ ಹೌಸ್ ಹೇಳಿಕೆ ಮತ್ತು ಅಮೇರಿಕ ಮೈತ್ರಿಗಳು ಬೆಂಬಲಿಸುವ ಭಯೋತ್ಪಾದನೆಯನ್ನು ಇರಾನಿಗಳು ಹೋರಾಡುವಾಗ ಸೆನೆಟ್ ನಿಷೇಧಗಳು. ಗೆಳೆತನಕ್ಕೆ ಅಮೆರಿಕಾದ ನಿರೀಕ್ಷೆಗಳನ್ನು ಇರಾನಿನ ಜನ ತಿರಸ್ಕರಿಸುತ್ತಾರೆ" ಎಂದು ಜರೀಫ್ ಗುರುವಾರ ಟ್ವೀಟ್ ಮಾಡಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಹೊಣೆಹೊತ್ತಿದ್ದ ತೆಹ್ರಾನ್ ಜೋಡಿ ದಾಳಿಯನ್ನು ಬುಧವಾರ ಟ್ರಂಪ್ ಖಂಡಿಸಿದ್ದರೂ "ಭಯೋತ್ಪಾದನೆಯನ್ನು ಉತ್ಪಾದಿಸುವ ದೇಶಗಳು ಅವರು ಪ್ರಚೋದಿಸುವ ರಾಕ್ಷಸನಿಗೆ ಅವರೇ ತುತ್ತಾಗುತ್ತಾರೆ" ಎಂದು ಹೇಳಿರುವುದಾಗಿ ಇ ಎಫ್ ಐ ನ್ಯೂಸ್ ವರದಿ ಮಾಡಿತ್ತು.
ಟ್ರಂಪ್ ಜೊತೆಗೆ ಹಲವು ಮಿಲಿಯನ್ ಡಾಲರ್ ಗಳ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ ಹಾಕಿರುವ ಸೌದಿ ಅರೇಬಿಯಾ ಸೇರಿದಂತೆ ವಾಷಿಂಗ್ಟನ್ ಮೈತ್ರಿ ದೇಶಗಳು ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ ಅದನ್ನು ಉತ್ಪಾದಿಸುತ್ತಿರುವ ನಿಜವಾದ ದೇಶಗಳು ಎಂದು ಕೂಡ ಸಚಿವರು ಹೇಳಿದ್ದಾರೆ.
"ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದಬ್ಬಾಳಿಕೆಯ ದೇಶಗಳು ಅದನ್ನು ನಮ್ಮ ನಾಡಿಗೂ ತರುವ ಬೆದರಿಕೆ ಹಾಕುತ್ತಿದ್ದಾರೆ"ಎಂದು ಕೂಡ ಅವರು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
"ಅವರ ನಾಯಕರು ದ್ವೇಷಿಸುವ ಪ್ರಜಾಪ್ರಭುತ್ವದ ನಾಡಿನ ಮೇಲೆ ಈಗ ಭಯೋತ್ಪಾದಕರು ದಾಳಿ ನಡೆಸಿದ್ದಾರೆ" ಎಂದು ಕೂಡ ಜರೀಫ್ ಹೇಳಿದ್ದಾರೆ.