ಬ್ರಿಟನ್ ಸಂಸತ್ ದಾಳಿಯ ಹೊಣೆ ಹೊತ್ತ ಐಎಸ್ಐಎಸ್

ಬ್ರಿಟನ್ ಸಂಸತ್ ಹೊರಗಡೆ ನಡೆದ ಉಗ್ರ ದಾಳಿಯ ಹೊಣೆಯನ್ನು ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಅಧಿವೇಶನ ನಡೆಯುತ್ತಿದ್ದ ವೇಳೆ....
ದಾಳಿ ನಡೆದ ಸ್ಥಳ
ದಾಳಿ ನಡೆದ ಸ್ಥಳ
ಲಂಡನ್: ಬ್ರಿಟನ್ ಸಂಸತ್ ಹೊರಗಡೆ ನಡೆದ ಉಗ್ರ ದಾಳಿಯ ಹೊಣೆಯನ್ನು ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಅಧಿವೇಶನ ನಡೆಯುತ್ತಿದ್ದ ವೇಳೆ ಬ್ರಿಟನ್‌ ಸಂಸತ್ ಬಳಿ ಗುಂಡಿನ ದಾಳಿ ನಡೆಸಿದ್ದು ತನ್ನ ಸೈನಿಕ ಎಂದು ಇಸ್ಲಾಮಿಕ್ ಸ್ಟೇಟ್ ಗುರುವಾರ ಹೇಳಿಕೊಂಡಿದೆ.
ಬ್ರಿಟಿಷ್ ಸಂಸತ ಹೊರಗಡೆ ದಾಳಿ ನಡೆಸಿದ ವ್ಯಕ್ತಿ ತನ್ನ ಸೈನಿಕ ಎಂದು ಇಸ್ಲಾಮಿಕ್ ಸ್ಟೇಟ್ ಹೇಳಿಕೊಂಡಿರುವುದಾಗಿ ಐಎಸ್ ಸಂಪರ್ಕ ಹೊಂದಿರುವ ಆಮಾಖ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕ ನೇತೃತ್ವದ ಒಕ್ಕೂಟದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಐಎಸ್ಐಎಸ್ ಸಂಘಟನೆ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಪೊಲೀಸರು ಇಂದು ವಿವಿಧ ಕಡೆ ದಾಳಿ ಮಾಡಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ನಾವು ಇಂದು ಲಂಡನ್ ಮತ್ತು ಬರ್ಮಿಂಗ್ ಹ್ಯಾಮ್ ಸೇರಿದಂತೆ ಆರು ಕಡೆ ಶೋಧ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದೇವೆ ಎಂದು ಬ್ರಿಟನ್ ಉಗ್ರ ನಿಗ್ರಹ ಪಡೆಯ ಹಿರಿಯ ಅಧಿಕಾರಿ ಮಾರ್ಕ್ ರೊವ್ಲಿ ಅವರು ಲಂಡನ್ ನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ನಿನ್ನೆ ಸಂಸತ್ ಒಳಗೆ ಸುಮಾರು 200ಕ್ಕೂ ಹೆಚ್ಚು ಸದಸ್ಯರು ಸೇರಿದಂತೆ ಪ್ರಧಾನಿಯೂ ಭಾಗಿಯಾಗಿದ್ದರು. ಅಧಿವೇಶನ ನಡೆಯುತ್ತಿದ್ದ ವೇಳೆ ಹೊರಭಾಗದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ 40ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ದಾಳಿಯಲ್ಲಿ ಸಾವನ್ನಪ್ಪಿದ್ದ ಐವರಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಮತ್ತು ಇಬ್ಬರು ಪಾದಚಾರಿಗಳು ಎನ್ನಲಾಗಿದೆ. ಉಗ್ರರ ದಾಳಿ ವೇಳೆ ವೆಸ್ಟ್​ಮಿನ್​ಸ್ಟ್ಟ್ ಪ್ರದೇಶದಲ್ಲಿದ್ದ ಪ್ರಧಾನಿ ಥೆರೆಸಾ ಮೇ ಅವರನ್ನು ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿ ಕಾರಿನಲ್ಲಿ ಬೇರೆಡೆ ಕಳಿಸಿದ್ದಾರೆ. ಪ್ರಧಾನಿ ಸುರಕ್ಷಿತವಾಗಿದ್ದು, ಅವರ ಭದ್ರತೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಇನ್ನು ಸಂಸತ್‌ನಲ್ಲಿದ್ದ ಸದಸ್ಯರು ಸುರಕ್ಷಿತವಾಗಿದ್ದಾರೆ. ಘಟನೆಯನ್ನು ಬ್ರಿಟನ್ ಪ್ರಧಾನಿ ಖಂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com