ಲಂಡನ್: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಸೋಮವಾರ ಲಂಡನ್ ಕೋರ್ಟ್ ಗೆ ಹಾಜರಾಗಿದ್ದು, ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 4ರಿಂದ 8 ದಿನ ವಿಚಾರಣೆ ನಡೆಯುವುದು ಖಚಿತವಾಗಿದೆ.
ಸದ್ಯ ಜಾಮೀನಿನ ಮೇಲೆ ಹೊರಗಿರುವ ವಿಜಯ್ ಮಲ್ಯ ಅವರು ಇಂದು ಪೂರ್ವ ವಿಚಾರಣೆಗಾಗಿ ಲಂಡನ್ ನ ವೆಸ್ಟ್ ಮಿನ್ಸ್ಟರ್ ಕೋರ್ಟ್ ಹಾಜರಾದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಡಿಸೆಂಬರ್ 4ರಂದು ಹಸ್ತಾಂತರ ಕುರಿತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಡಿಸೆಂಬರ್ 4ರಿಂದ ಡಿಸೆಂಬರ್ 14ರ ವರೆಗೆ ವಿಚಾರಣೆ ನಡೆಯಲಿದ್ದು, ಬಳಿಕ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕೋರ್ಟ್ ತನ್ನ ನಿರ್ಧಾರ ಪ್ರಕಟಿಸಲಿದೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಯ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪದೇಪದೆ ಹೇಳುತ್ತಿದ್ದೇನೆ. ಕೋರ್ಟ್ ನಲ್ಲಿ ಸಾಕ್ಷ್ಯಗಳು ಮಾತನಾಡಲಿವೆ ಎಂದಿದ್ದಾರೆ.
ಭಾರತ–ಬ್ರಿಟನ್ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಷ್ಕರಿಸಿದ್ದು, ಹಸ್ತಾಂತರಿಸುವ ಕುರಿತು ವಿಚಾರಣೆ ನಡೆಯುತ್ತಿದೆ.
9 ಸಾವಿರ ಕೋಟಿ ರುಪಾಯಿ ಸಾಲ ಮಾಡಿಕೊಂಡು ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಕೋರ್ಟ್ ಗಳಿಂದ ಹಲವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಇದೀಗ ಮಲ್ಯ ಅವರನ್ನು ದೇಶಕ್ಕೆ ಕರೆತರುವ ಕಾನೂನು ಪ್ರಕ್ರಿಯೆ ನಡೆಯುತ್ತಿದೆ.