ಇಸ್ಲಾಮಾಬಾದ್: ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ತಮ್ಮನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ತೀರ್ಪನ್ನು ಪ್ರಶ್ನಿಸಿ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರು ಕುಟುಂಬದವರು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಪಾಕ್ ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಕಳೆದ ಜುಲೈ 28ರಂದು ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸಿದ ಪಾಕ್ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆಸಿಫ್ ಸಯೀದ್ ಖೋಸಾ ನೇತೃತ್ವದ ಐದು ಸದಸ್ಯರ ಸುಪ್ರೀಂ ಪೀಠ ಇಂದು ವಜಾಗೊಳಿಸಿದೆ.
ಪನಾಮ ಪ್ರಕರಣದಲ್ಲಿ ಷರೀಫ್ ಅವರು ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರಿಂದ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡಿದ್ದರು.
ಪನಾಮಾ ಪ್ರಕರಣದಲ್ಲಿ ನವಾಜ್ ಷರೀಫ್ ಅವರನ್ನು ಮಾತ್ರವಲ್ಲದೆ ಅವರ ಮಕ್ಕಳಾದ ಹುಸೇನ್, ಹಸನ್ ಮತ್ತು ಮರ್ಯಾಮ್ ನವಾಜ್ ಹಾಗೂ ಅಳಿಯ ಮೊಹಮ್ಮದ್ ಸಫ್ದರ್ ದೋಷಿಗಳೆಂದು ತೀರ್ಪು ನೀಡಿ, ಅವರ ವಿರುದ್ಧ ಭ್ರಷ್ಟಾಚಾರದ ಕೇಸುಗಳನ್ನು ದಾಖಲಿಸುವುದಕ್ಕೆ ಆದೇಶ ನೀಡಿತ್ತು.