ಲಾಹೋರ್: ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವಹಿವಾಟು ನಡೆಸಿದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳನ್ನು ಮತ್ತು ಆಸ್ತಿಯನ್ನು ಪಾಕಿಸ್ತಾನ ಭ್ರಷ್ಟಾಚಾರ ತಡೆ ಸಂಸ್ಥೆ ಶುಕ್ರವಾರ ಜಪ್ತಿ ಮಾಡಿದೆ.
ಪನಾಮ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಜುಲೈ 28ರಂದು ಪಾಕ್ ಸುಪ್ರೀಂ ಕೋರ್ಟ್ 67 ವರ್ಷದ ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸಿ, ಅವರ ವಿರುದ್ಧ ಭ್ರಷ್ಟಾಚಾರ ಕೇಸ್ ದಾಖಲಿಸುವಂತೆ ತೀರ್ಪು ನೀಡಿದ ದ ನಂತರ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಮಾಜಿ ಪ್ರಧಾನಿ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಕೌಂಟೇಬಿಲಿಟಿ ಕೋರ್ಟ್, ನವಾಜ್ ಷರೀಫ್, ಅವರ ಪುತ್ರಿ ಮರ್ಯಾಮ್ ಮತ್ತು ಅಳಿಯ ಕ್ಯಾಪ್ಟನ್ ಸಫ್ದರ್ ಅವರಿಗೆ ಸೆಪ್ಟೆಂಬ್ 26ರಂದು ವಿಚಾರಣೆಗೆ ಹಾಜರಾಗುವಂತೆ ಇಂದು ಸಮನ್ಯ್ ಜಾರಿ ಮಾಡಿದೆ.
ನ್ಯಾಷನಲ್ ಅಕೌಂಟೇಬಿಲಿಟಿ ಬ್ಯುರೋ(ಎನ್ಎಬಿ) ಕೋರ್ಟ್ ನೀಡಿದ ಸಮನ್ಸ್ ಮತ್ತು ಆಸ್ತಿ ಜಪ್ತಿಯ ನೋಟಿಸ್ ಅನ್ನು ರೈವಿಂಡ್ ದಲ್ಲಿರುವ ಷರೀಫ್ ನಿವಾಸಕ್ಕೆ ಅಂಟಿಸಿದೆ. ಆದರೆ ಷರೀಫ್ ಮತ್ತು ಅವರ ಕುಟುಂಬ ಅನಾರೋಗ್ಯ ಪೀಡಿತ ಪತ್ನಿ ಕುಲ್ಸೂಮ್ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದೆ.
ಮೂಲಗಳ ಪ್ರಕಾರ, ನವಾಜ್ ಷರೀಫ್ ಅವರು ಎನ್ ಎಬಿ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ಎದುರಿಸಬೇಕಾಗಿರುವುದರಿಂದ ಸದ್ಯ ಪಾಕ್ ಗೆ ಮರಳುವುದಿಲ್ಲ ಎನ್ನಲಾಗಿದೆ. ಆದರೆ ಪಿಎಂಎಲ್ ಎನ್ ಇದನ್ನು ತಳ್ಳಿಹಾಕಿದ್ದು, ಪತ್ನಿ ಗುಣಮುಖರಾದ ನಂತರ ಷರೀಫ್ ದೇಶಕ್ಕೆ ಮರಳುತ್ತಾರೆ ಎಂದು ಹೇಳಿದೆ.
ನವಾಜ್ ಷರೀಫ್ ಹಾಗೂ ಅವರ ಮಕ್ಕಳ ಮತ್ತು ಅಳಿಯನ ಬ್ಯಾಂಕ್ ಖಾತೆಗಳ ಮೇಲೆ ನಿಗಾವಹಿಸುವಂತೆ ನಾವು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಮತ್ತು ಇತರೆ ವಾಣಿಜ್ಯ ಬ್ಯಾಂಕ್ ಗಳಿಗೆ ಪತ್ರ ಬರೆದಿರುವುದಾಗಿ ಎನ್ ಎಬಿ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.