ಪಾಕ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮನೆ ಮೇಲೆ ಗುಂಡಿನ ದಾಳಿ

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಾಹೋರ್: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮನೆ ಮೇಲೆ ಬಂದೂಕುದಾರಿಯೊಬ್ಬ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ಘಟನೆ ಭಾನುವಾರ ನಡೆದಿದೆ.
ನ್ಯಾಯಾಧೀಶ ಇಜಾಜ್ ಉಲ್ ಅಹ್ಸಾನ್ ಅವರ ಮನೆ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಳಾದ ಬಗ್ಗೆ ವರದಿಯಾಗಿಲ್ಲ. ಆದರೆ ಘಟನೆಗೆ ಪಾಕಿಸ್ತಾನದಾದ್ಯಂತ ಭಾರಿ ಖಂಡನೆ ವ್ಯಕ್ತವಾಗಿದೆ.
ಪಾಕ್ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ನ್ಯಾಯಮೂರ್ತಿ ಅಹ್ಸಾನ್ ಅವರ ನಿವಾಸವನ್ನು ಇಂದು ಬೆಳಗಿನ ಜಾವ 4.30ಕ್ಕೆ ಮತ್ತು ಬೆಳಗ್ಗೆ 9 ಗಂಟೆಗೆ ಎರಡು ಬಾರಿ ಟಾರ್ಗೆಟ್ ಮಾಡಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಖಿಬ್ ನಿಸಾರ್ ಅವರು ನ್ಯಾಯಾಧೀಶ ಅಹ್ಸಾನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಆರಿಫ್ ನವಾಜ್ ಖಾನ್ ಅವರನ್ನು ಕರೆಯಿಸಿಕೊಂಡಿದ್ದಾರೆ.
ಸ್ವತಃ ಮುಖ್ಯ ನ್ಯಾಯಮೂರ್ತಿಗಳೇ ಘಟನೆಯ ಉಸ್ತುವಾರಿ ವಹಿಸಿಕೊಂಡಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.
ಪೊಲೀಸರು ಸಹ ಪ್ರಕರಣದ ತನಿಖೆ ನಡೆಸುತ್ತಿದ್ದು, ದುಷ್ಕರ್ಮಿ ಒಟ್ಟು ಎರಡು ಗುಂಡುಗಳನ್ನು ಹಾರಿಸಿದ್ದಾನೆ. ಒಂದು ಗುಂಡು ಪ್ರವೇಶ ಗೇಟ್ ಮೇಲೆ ಹಾಗೂ ಮತ್ತೊಂದು ಗುಂಡು ಅಡುಗೆ ಮನೆಯ ಬಾಗಿಲಿಗೆ ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ನ್ಯಾಯಾಧೀಶರ ಮನೆ ಬಳಿ ಎಲೈಟ್ ಪಡೆಯ ಕಮಾಂಡೋಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವಕ್ತಾರ ನಿಯಬ್ ಹೈದರ್ ಅವರು ಹೇಳಿದ್ದಾರೆ.
ಪಾಕ್ ಪ್ರಧಾನಿ ಶಹಿದ್ ಖಖನ್ ಅಬ್ಬಾಸಿ ಅವರು ಸಹ ಖಂಡನೆಯನ್ನು ಖಂಡಿಸಿದ್ದು, ಕೂಡಲೇ ಆರೋಪಿಯನ್ನು ಬಂಧಿಸುವಂತೆ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com