ಖಲಿಸ್ತಾನ್‌ ವಿವಾದ: ಸಿಖ್ ಯಾತ್ರಿಕರಿಗೆ ಪ್ರಚೋದನೆ ಆರೋಪ ತಳ್ಳಿಹಾಕಿದ ಪಾಕ್

ಖಲಿಸ್ತಾನ್‌ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ, ಭಾರತೀಯ ಸಿಖ್ ಯಾತ್ರಿಕರಿಗೆ ಪ್ರಚೋದನೆ ನೀಡುತ್ತಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್: ಖಲಿಸ್ತಾನ್‌ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ, ಭಾರತೀಯ ಸಿಖ್ ಯಾತ್ರಿಕರಿಗೆ ಪ್ರಚೋದನೆ ನೀಡುತ್ತಿದೆ ಎಂಬ ಭಾರತದ ಆರೋಪವನ್ನು ಪಾಕ್ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಖಲಿಸ್ತಾನ್ ವಿವಾದವನ್ನು ಕೆಣಕಿದ ಪಾಕಿಸ್ತಾನದ ವಿರುದ್ಧ ನಿನ್ನೆ ತೀವ್ರವಾಗಿ ಪ್ರತಿಭಟಿಸಿದ್ದ ಭಾರತ, ಈ ಸಂಬಂಧ ದೆಹಲಿಯಲ್ಲಿರು ಪಾಕಿಸ್ತಾನ ರಾಯಭಾರಿಗೆ ಸಮನ್ಸ್ ಜಾರಿ ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ಕಚೇರಿ, ಭಾರತ ಇಂತಹ ಸುಳ್ಳುತನಗಳನ್ನು ಹರಡುವ ಮೂಲಕ, ಸಿಖ್ ಯಾತ್ರಿಗಳ ಭೇಟಿಯ ಸುತ್ತಲೂ ಉದ್ದೇಶಪೂರ್ವಕವಾಗಿ ಮತ್ತಷ್ಟು ವಿವಾದ ಸೃಷ್ಟಿಸುತ್ತಿದೆ ಎಂದಿದೆ.
ಪಾಕಿಸ್ತಾನ, ಭಾರತ ಸೇರಿದಂತೆ ವಿಶ್ವದ ಎಲ್ಲಾ ಕಡೆಯಿಂದ ಬರುವ ಹಿಂದೂ ಮತ್ತು ಸಿಖ್ ಯಾತ್ರಿಕರನ್ನು ಸ್ವಾಗತಿಸುತ್ತದೆ ಎಂದು ಪಾಕ್ ವಿದೇಶಾಂಗ ಕಚೇರಿ ತಿಳಿಸಿದೆ.
ಕಳೆದ ಏಪ್ರಿಲ್ 12ರಂದು ಭಾರತದ 1,800 ಸಿಖ್‌ ಯಾತ್ರಿಕರು ಪಾಕಿಸ್ತಾನದಲ್ಲಿರುವ ಗುರುದ್ವಾರ ಪಂಜಾ ಸಾಹಿಬ್‌‌ಗೆ ತೆರಳಿದ್ದರು. ಈ ವೇಳೆ ಭಾರತೀಯ ಪ್ರಜೆಗಳಿಗೆ ಪಾಕ್‌ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ಅಲ್ಲದೇ, ಸಿಖ್‌ ಯಾತ್ರಿಕರಿಗೆ ಒದಗಿಸಬಹುದಾದ ನೆರವಿಗೂ ಪಾಕ್‌ ಅಡ್ಡಿಪಡಿಸಿತ್ತು. 
ಈ ವೇಳೆ ಖಲಿಸ್ತಾನ್‌ ವಿವಾದ ಪ್ರಸ್ತಾಪಿಸಿ ಪಾಕ್‌ ಪ್ರಚೋದನಾತ್ಮಕ ಹೇಳಿಕೆ ಹಾಗೂ ಪೋಸ್ಟರ್ ಗಳನ್ನು ಪ್ರದರ್ಶಿಸಿತ್ತು ಎನ್ನಲಾಗಿದ್ದು, ಪಾಕ್‌ನ ಈ ನಡೆ ಬಗ್ಗೆ ಭಾರತ ತೀವ್ರವಾಗಿ ಪ್ರತಿಭಟಿಸಿದೆ. ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವಂತಹ ಕೃತ್ಯಗಳನ್ನು ತಕ್ಷಣವೇ ನಿಲ್ಲಿಸುವಂತೆ ಡೆಪ್ಯುಟಿ ಹೈಕಮಿಷನರ್‌‌‌ಗೆ ಸಮನ್ಸ್‌ ಜಾರಿಗೊಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com