ನೆಹರೂರವರಿಂದ ಮನಮೋಹನ್ ಸಿಂಗ್ ವರೆಗೆ ಬಿಜೆಪಿ ಸರ್ಕಾರದಂತೆ ಎನ್ ಆರ್ ಐಗಳ ಸಮಸ್ಯೆಗಳನ್ನು ಬಗೆಹರಿಸಿಲ್ಲ; ಸುಷ್ಮಾ ಸ್ವರಾಜ್

ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರಿಂದ ಹಿಡಿದು ಡಾ ಮನಮೋಹನ್ ಸಿಂಗ್ ವರೆಗೆ ವಿದೇಶಗಳಲ್ಲಿರುವ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ಅಸ್ತನ(ಕಜಕಸ್ತಾನ): ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರಿಂದ ಹಿಡಿದು ಡಾ ಮನಮೋಹನ್ ಸಿಂಗ್ ವರೆಗೆ ವಿದೇಶಗಳಲ್ಲಿರುವ ಭಾರತೀಯ ಸಮುದಾಯಗಳ ಸಮಸ್ಯೆಗಳ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಮನ ಹರಿಸಿದಷ್ಟು ಬೇರೆ ಯಾವ ಸರ್ಕಾರಗಳೂ ನೀಡಿರಲಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಜಕಿಸ್ತಾನ ರಾಜಧಾನಿ ಅಸ್ತನದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ತೋರಿಸಿದಷ್ಟು ಪ್ರೀತಿ, ಕಾಳಜಿ ಅನಿವಾಸಿ ಭಾರತೀಯರ ಮೇಲೆ ಈ ಹಿಂದೆ ಯಾವ ಸರ್ಕಾರಗಳೂ ತೋರಿಸಿರಲಿಲ್ಲ. ವಿದೇಶಗಳಿಗೆ ಹೋಗಿ ರ್ಯಾಲಿಗಳಲ್ಲಿ ಭಾರತೀಯ ಸಮುದಾಯಗಳನ್ನು ಉದ್ದೇಶಿಸಿ ಮಾತನಾಡಿದವರು ಅವರ ಸಮಸ್ಯೆಗಳನ್ನು ಆಲಿಸಿದ ಪ್ರಧಾನಿಯನ್ನು ಈ ಹಿಂದೆ ಭಾರತ ಕಂಡಿಲ್ಲ ಎಂದು ಹೇಳಿದರು.

ವಿಶ್ವದಲ್ಲಿ ಅಸ್ತನ ಎರಡನೇ ಅತಿ ಶೀತ ಪ್ರದೇಶ ಎಂದು ಕೇಳಿದ್ದೇನೆ. ಆದರೆ ಕಜಕಿಸ್ತಾನದ ಜನರು ತೋರಿಸುವ ಪ್ರೀತಿ, ಆದರಗಳಿಂದ ನಮಗೆ ಇಲ್ಲಿ ಶೀತ, ಚಳಿಯ ಅನುಭವವಾಗುವುದಿಲ್ಲ, ಬೆಚ್ಚನೆಯ ಸುರಕ್ಷಿತ ಭಾವನೆ ಉಂಟಾಗುತ್ತದೆ ಎಂದರು. ಅನಿವಾಸಿ ಭಾರತೀಯರ ಸೇವೆಗೆ 24*7 ಗಂಟೆಗಳ ಕಾಲ ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಇಲಾಖೆ ಸಿದ್ಧವಿದೆ ಎಂದು ಕೂಡ ಹೇಳಿದರು.

ಕೇವಲ ಭಾರತೀಯ ರಾಯಭಾರಿ ಕಚೇರಿಗಳಿಂದ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಇದಕ್ಕಾಗಿ ನಾನೇ ಖುದ್ದಾಗಿ ಟ್ವಿಟ್ಟರ್ ನಲ್ಲಿ ಜನರಿಗೆ ಸ್ಪಂದಿಸುತ್ತೇನೆ. ನಾವು ಯಾವಾಗ ಬೇಕಾದರೂ ನಿಮ್ಮ ಸೇವೆಗೆ ಲಭ್ಯರಿದ್ದೇವೆ. ಮಧ್ಯರಾತ್ರಿ 1 ಗಂಟೆಗೆ ನಾನು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದಿದ್ದಾರೆ.

ಸುಷ್ಮಾ ಸ್ವರಾಜ್ ಪ್ರಸ್ತುತ ಕೇಂದ್ರ ಏಷ್ಯಾದ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಕಜಕಿಸ್ತಾನದ ನಂತರ ಅವರು ಕಿರ್ಗಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com