ಈ ಜಗತ್ತು ಅಷ್ಟು ಕೆಟ್ಟದಾಗಿಲ್ಲ ಎಂದು ತೋರಿಸಲು ನಾನು ಪ್ರಧಾನಿಯವರನ್ನು ಅಪ್ಪಿಕೊಂಡೆ: ರಾಹುಲ್ ಗಾಂಧಿ

ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಭಾಷಣದಲ್ಲಿ ಸರ್ಕಾರ ಮತ್ತು ಪ್ರಧಾನ ಮಂತ್ರಿ ...
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿಯನ್ನು ಆಲಂಗಿಸಿದ್ದ ಸಂದರ್ಭ
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿಯನ್ನು ಆಲಂಗಿಸಿದ್ದ ಸಂದರ್ಭ

ಹ್ಯಾಂಬರ್ಗ್(ಜರ್ಮನಿ): ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಭಾಷಣದಲ್ಲಿ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಗಂಭೀರ ಆರೋಪ ಮಾಡಿ ನಂತರ ಪ್ರಧಾನಿಯವರ ಬಳಿಗೆ ಹೋಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಲಿಂಗನ ಮಾಡಿದ್ದು ವ್ಯಾಪಕ ಸುದ್ದಿಯಾಗಿತ್ತು. ಮೂರ್ನಾಲ್ಕು ದಿನ ರಾಹುಲ್ ಗಾಂಧಿಯವರ ಈ ನಡತೆ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾದವು.

ಇದೀಗ ಈ ಬಗ್ಗೆ ಸ್ವತಃ ರಾಹುಲ್ ಗಾಂಧಿಯವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜರ್ಮನಿಗೆ ಎರಡು ದಿನಗಳ ಭೇಟಿಗೆ ತೆರಳಿರುವ ಅವರು ಹ್ಯಾಮ್ ಬರ್ಗ್ ನಲ್ಲಿ ನಿನ್ನೆ ಬುಸೆರಿಯಸ್ ಸಮ್ಮರ್ ಸ್ಕೂಲ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಪ್ರಧಾನ ಮಂತ್ರಿಗಳು ನನ್ನ ಮೇಲೆ ದ್ವೇಷದ ಮಾತುಗಳನ್ನಾಡುತ್ತಿದ್ದರು, ಅಂತಹ ಸಂದರ್ಭದಲ್ಲಿ ನಾನು ಪ್ರೀತಿ, ಬಾಂಧವ್ಯವನ್ನು ತೋರಿಸಲು ಅವರ ಬಳಿಗೆ ಹೋಗಿ ಅವರನ್ನು ಆಲಂಗಿಸಿಕೊಂಡೆ, ಈ ಜಗತ್ತಿನಲ್ಲಿ ದ್ವೇಷ ಒಂದೇ ಇರುವುದಲ್ಲ, ನಾವು ಅಂದುಕೊಂಡಷ್ಟು ಜಗತ್ತು ಕೆಟ್ಟದಾಗಿಲ್ಲ, ಎಲ್ಲಾ ಕೆಟ್ಟದಾಗಿದೆ ಎಂದು ಭಾವಿಸಬೇಕಾಗಿಲ್ಲ ಎಂದು  ತೋರಿಸಲು ಪ್ರಧಾನಿಯವರ ಬಳಿಗೆ ಹೋಗಿ ಅವರನ್ನು ಅಪ್ಪಿಕೊಂಡೆ ಎಂದಿದ್ದಾರೆ.

ಆದರೆ ಪ್ರಧಾನಿಯವರು ನನ್ನ ಅಪ್ಪುಗೆಯನ್ನು ಸ್ವೀಕರಿಸಲಿಲ್ಲ. ಕುಳಿತಲ್ಲಿಂದ ಹಿಂದೆ ಸರಿಯಲು ನೋಡಿದರು ಮತ್ತು ಗಲಿಬಿಲಿಯಾದರು, ಅವರು ನನ್ನ ವರ್ತನೆಯನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿರಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ತಮ್ಮ ಮಾತನ್ನು ಮುಂದುವರಿಸುತ್ತಾ ಮಹಾತ್ಮಾ ಗಾಂಧಿಯವರು ಹೇಳಿದ್ದ ಒಂದು ಮಾತನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ನಮಗೆ ಯಾರಾದರೂ ಹೊಡೆದರೆ ತಿರುಗಿ ಅವರಿಗೆ ಹೊಡೆಯುವುದರಲ್ಲಿ ಅರ್ಥವಿಲ್ಲ, ಅದರಿಂದ ದ್ವೇಷ, ಅಸೂಯೆ, ವೈರತ್ವ ಇನ್ನೂ ಹೆಚ್ಚಾಗುತ್ತದೆ, ಸಂಘರ್ಷ, ಜಗಳಗಳಿಗೆ ಪ್ರತಿ ಸಂಘರ್ಷ ನಡೆಸುವುದು ಉತ್ತರವಲ್ಲ, ಹಲವು ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದರು.

ತಮ್ಮ ವೈಯಕ್ತಿಕ ಜೀವನದ ಅನುಭವ ಹೇಳಿದ ಅವರು, ನಮ್ಮ ತಂದೆ ರಾಜೀವ್ ಗಾಂಧಿಯವರನ್ನು ಕೊಂದವರನ್ನು ನಾನು ಮತ್ತು ನನ್ನ ಸೋದರಿ ಪ್ರಿಯಾಂಕಾ ಕ್ಷಮಿಸಿದ್ದೇವೆ. ನನ್ನ ತಂದೆಯನ್ನು ಕೊಲ್ಲಲು ಕಾರಣರಾದ ಶ್ರೀಲಂಕಾದ ಎಲ್ ಟಿಟಿಇ ನಾಯಕ ಮಡಿದಾಗ ನನಗೆ ಸಂತೋಷವಾಗಲಿಲ್ಲ. ಅವನಲ್ಲಿ ಅವನ ಅಳುವ ಮಕ್ಕಳನ್ನು ಕಂಡೆ ಎಂದು ಹೇಳಿದ್ದಾರೆ.

ಆದರೆ ಪ್ರಧಾನಿಯವರನ್ನು ಅಪ್ಪಿಕೊಂಡದ್ದು ಕಾಂಗ್ರೆಸ್ ನಲ್ಲಿಯೇ ಕೆಲವರಿಗೆ ಇಷ್ಟವಾಗಲಿಲ್ಲ ಎಂಬ ಮಾತನ್ನು ಸಹ ರಾಹುಲ್ ಗಾಂಧಿ ಒಪ್ಪಿಕೊಂಡರು. ನೀವು ಪ್ರಧಾನಿಯವರನ್ನು ಹೋಗಿ ತಬ್ಬಿಕೊಳ್ಳಬಾರದಾಗಿತ್ತು ಎಂದರು, ಆದರೆ ಇಲ್ಲ, ನಾನು ಮಾಡಿದ್ದು ಸರಿ ಎಂದು ನಮ್ಮ ಪಕ್ಷದವರಿಗೆ ಹೇಳಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com