ಕಾಠ್ಮಂಡು: 4ನೇ ಬಹುಕ್ಷೇತ್ರ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿಯ ಉಪಕ್ರಮ(ಬಿಐಎಂಎಸ್‌ಟಿಇಸಿ-ಬಿಮ್‌ಸ್ಟೆಕ್) ಶೃಂಗಸಭೆಗೆ ಶುಕ್ರವಾರ ತೆರೆ ಬಿದ್ದಿದ್ದು, ಅಧ್ಯಕ್ಷತೆಯನ್ನು ಶ್ರೀಲಂಕಾಗೆ ವರ್ಗಾಯಿಸಲಾಗಿದೆ.
ಎರಡು ದಿನಗಳ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ನಿಷ್ಕ್ರಿಯ ಎಂದು ಟೀಕೆಗೆ ಗುರಿಯಾಗಿದ್ದ ಕೆಲವು ಪ್ರಾದೇಶಿಕ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಬಿಮ್ ಸ್ಟೆಕ್ ಹಾಲಿ ಅಧ್ಯಕ್ಷರಾಗಿರುವ ನೇಪಾಳ ಈಗ ಅಧ್ಯಕ್ಷತೆಯನನ್ನು ಶ್ರೀಲಂಕಾಗೆ ವರ್ಗಾಯಿಸಿದೆ.
ಈ ಸಂಸ್ಥೆ ಹೆಚ್ಚು ಹೆಚ್ಚು ಫಲಿತಾಂಶಗಳನ್ನು ನೀಡುವಂತಾಗಬೇಕು ಎಂದು ಬಿಮ್ ಸ್ಟೆಕ್ ನಿರ್ಗಮಿತ ಅಧ್ಯಕ್ಷ ಹಾಗೂ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಹೇಳಿದ್ದಾರೆ.
ಬಿಮ್ ಸ್ಟೆಕ್ ದಕ್ಷಿಣ ಏಷ್ಯಾದ ಏಳು ರಾಷ್ಟ್ರಗಳ ಅಂತಾರಾಷ್ಟ್ರೀಯ ಒಕ್ಕೂಟವಾಗಿದ್ದು, ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕಾ, ಥೈಲ್ಯಾಂಡ್, ಭೂತಾನ್ ಮತ್ತು ನೇಪಾಳ ಇದರ ಸದಸ್ಯ ರಾಷ್ಟ್ರಗಳಾಗಿವೆ. ಬ್ಯಾಂಕಾಕ್ ಘೋಷಣೆಯ ಮೂಲಕ 1997ರ ಜೂನ್ 6ರಂದು ಬಿಐಎಂಎಸ್‌ಟಿಇಸಿ ಅಸ್ತಿತ್ವಕ್ಕೆ ಬಂದಿದೆ.
ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ ಮತ್ತು ಮ್ಯಾನ್ಮಾರ್ ಮುಖ್ಯಸ್ಥ ವಿನ್‌ಮೈಂಟ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮೋದಿ ಇಂದು ಭಾರತಕ್ಕೆ ಮರಳಲಿದ್ದಾರೆ.