ಶ್ರೀಲಂಕಾ ಪ್ರಧಾನಮಂತ್ರಿ ಹುದ್ದೆಗೆ ರಾಜಪಕ್ಸೆ ರಾಜೀನಾಮೆ- ರಾಜಪಕ್ಸೆ ಪುತ್ರ ಹೇಳಿಕೆ
ಕೊಲಂಬೊ: ಶ್ರೀಲಂಕಾದ ವಿವಾದಾತ್ಮಕ ಪ್ರಧಾನಿಯಾಗಿ ನೇಮಕವಾಗಿದ್ದ ಮಹಿಂದಾ ರಾಜಪಕ್ಸೆ ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅವರ ಪುತ್ರ ಇಂದು ಹೇಳಿದ್ದಾರೆ.
ರಾಷ್ಟ್ರದ ಭದ್ರತೆ ದೃಷ್ಟಿಯಿದ ಮಾಜಿ ಅಧ್ಯಕ್ಷ ರಾಜಪಕ್ಸ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ರಾಜಪಕ್ಸ ಪುತ್ರ ನಾಮಲ್ ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾ ಪ್ರೀಡಂ ಪಾರ್ಟಿ ಮತ್ತಿತರರು ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಅವರೊಂದಿಗೆ ವಿಶಾಲವಾದ ರಾಜಕೀಯ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಮಹಿಂದಾ ರಾಜಪಕ್ಸ ಈಗ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ರಾಜಪಕ್ಸ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿ, ಸಂಸತ್ ವಿಸರ್ಜಿಸಿರುವುದು ಅಕ್ರಮ ಎಂದು ಸುಪ್ರೀಂಕೋರ್ಟ್ ಹೇಳಿಕೆ ನೀಡಿದ ನಂತರ ರಾಜಪಕ್ಸ ಈ ನಿರ್ಧಾರ ಕೈಗೊಂಡಿದ್ದಾರೆ.
ರಾಜಪಕ್ಸ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸುವಂತಿಲ್ಲ ಹಾಗೂ ಅವರ ಸಂಪುಟವು ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದ್ದು, ರಾಜಪಕ್ಸ ದಾಖಲಿಸಿರುವ ಅರ್ಜಿ ವಿಚಾರಣೆಯನ್ನು ಮುಂದಿನ ವರ್ಷದ ಜನವರಿ 16,17, 18 ರಂದು ನಡೆಸುವುದಾಗಿ ಹೇಳಿಕೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ