ಭ್ರಷ್ಟಾಚಾರ ಪ್ರಕರಣ: ಪಾಕ್ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಗೆ 7 ವರ್ಷ ಜೈಲು

ಅಲ್-ಅಝಿಝಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್...
ನವಾಜ್ ಷರೀಫ್
ನವಾಜ್ ಷರೀಫ್
ಇಸ್ಲಾಮಾಬಾದ್: ಅಲ್-ಅಝಿಝಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರಿಗೆ ಭ್ರಷ್ಟಾಚಾರ ನಿಗ್ರಹ ಕೋರ್ಟ್ ಸೋಮವಾರ ಏಳು ವರ್ಷ ಶಿಕ್ಷೆ ವಿಧಿಸಿದೆ.
ನವಾಜ್ ಷರೀಫ್ ವಿರುದ್ಧದ ಎರಡು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸಿದ ಅಕೌಂಟಬೆಲಿಟಿ ಕೋರ್ಟ್ ನ್ಯಾಯಾಧೀಶ ಮಹಮದ್ ಅರ್ಷದ್ ಮಲ್ಲಿಕ್, ಒಂದು ಪ್ರಕರಣದಲ್ಲಿ 68 ವರ್ಷದ ನವಾಜ್ ಷರೀಫ್ ಅವರನ್ನು ಖುಲಾಸೆಗೊಳಿಸಿದ್ದಾರೆ.
ಕಳೆದ ವಾರ ನವಾಜ್ ಷರೀಫ್ ವಿರುದ್ಧ ಫ್ಲಾಗ್‍ಶಿಪ್ ಇನ್ವೆಸ್ಟ್‍ಮೆಂಟ್ ಮತ್ತು ಅಲ್-ಅಝಿಝಿಯಾ ಪ್ರಕರಣಗಳ ವಿಚಾರಣೆಗಳನ್ನು ಪೂರ್ಣಗೊಳಿಸಿದ್ದ ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಮಹಮದ್ ಅರ್ಷದ್ ಮಲ್ಲಿಕ್ ಅವರು, ಪಾಕ್ ಮಾಜಿ ಪ್ರಧಾನಿಗೆ ಒಂದು ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆ ವಿಧಿಸಿದ್ದಾರೆ.
ಈಗಾಗಲೇ ಒಂದು ಪ್ರಕರಣದಲ್ಲಿ 11 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ನವಾಜ್ ಅವರು ಈಗ ಮತ್ತೆ ಏಳು ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ.
ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ವಿರುದ್ಧ ದಾಖಲಾಗಿರುವ ಉಳಿದೆರಡು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ಡಿ.24ರೊಳಗೆ ಪೂರ್ಣಗೊಳಿಸುವಂತೆ ಪಾಕಿಸ್ತಾನ ಸುಪ್ರೀಂಕೋರ್ಟ್ ಗಡವು ನಿಗದಿಗೊಳಿಸಿತ್ತು.
ಅವೆನ್‍ಫೀಲ್ಡ್ ಪ್ರಾಪರ್ಟಿಸ್, ಫ್ಲಾಗ್‍ಶಿಪ್ ಇನ್ವೆಸ್ಟ್‍ಮೆಂಟ್ ಹಾಗೂ ಅಲ್-ಅಝಿಝಿಯಾ ಈ ಮೂರು ಭ್ರಷ್ಟಾಚಾರ ಪ್ರಕರಣಗಳು ನವಾಜ್ ಕೊರಳು ಸುತ್ತಿಕೊಂಡಿದ್ದವು.
2017ರ ಜುಲೈನಲ್ಲಿ ಪನಾಮ ಪೇಪರ್ಸ್ ಹಗರಣದಲ್ಲಿ ಸುಪ್ರೀಂಕೋರ್ಟ್ ನವಾಜ್ ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com