ನಿಮ್ಮ ಎಲ್ಲ ಕನಸುಗಳನ್ನು ನಾವು ನನಸು ಮಾಡುತ್ತೇವೆ: ಪ್ರಧಾನಿ ನರೇಂದ್ರ ಮೋದಿ

ನೀವು ಭಾರತದ ಪ್ರತಿ ಭಾಗವನ್ನು ಪ್ರತಿನಿಧಿಸುತ್ತಿದ್ದೀರಿ, ಭಾರತ ಎಷ್ಟು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂಬುದು...
ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
Updated on
ಅಬುದಾಬಿ: ನೀವು ಭಾರತದ ಪ್ರತಿ ಭಾಗವನ್ನು ಪ್ರತಿನಿಧಿಸುತ್ತಿದ್ದೀರಿ, ಭಾರತ ಎಷ್ಟು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂಬುದು ನಿಮಗೆ ಗೊತ್ತಿದೆ ಎಂದು ಅಬುದಾಬಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಮುದಾಯವನ್ನುದ್ದೇಶಿಸಿ ಹೇಳಿದರು.
ಪ್ರಧಾನಿಯಾದ ನಂತರ ಎರಡನೇ ಬಾರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ನಿನ್ನೆ ತೆರಳಿದ ಪ್ರಧಾನಿ ಮೋದಿ ಇಂದು ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.ನಂತರ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿ, ಭಾರತ ಇಂದು ನಿರಾಶಾವಾದದ ಹಂತವನ್ನು ದಾಟಿ ಹೋಗಿದೆ. ಇದು ಸಾಧ್ಯವೇ ಎಂಬ ಮನಸ್ಥಿತಿಯಿಂದ ಇಂದು ಭಾರತೀಯರು ಹೊರಬಂದು ಮೋದಿಯವರೇ ಯಾವಾಗ ಇದು ಆಗುತ್ತದೆ ಎಂದು ಕೇಳುವ ಸ್ಥಿತಿಗೆ ಬಂದಿದ್ದಾರೆ. ಇದು ಆಗುವುದಿದ್ದರೆ ಈಗಲೇ ಆಗುತ್ತದೆ ಎಂಬ ಹೊಸ ನಂಬಿಕೆ ಜನರಲ್ಲಿ ಮೂಡಿದೆ ಎಂದು ಹೇಳಿದರು.
ವಿಶ್ವಬ್ಯಾಂಕಿನ ವರದಿ ಪ್ರಕಾರ ಸುಗಮ ವ್ಯಾಪಾರದಲ್ಲಿ ಭಾರತದಷ್ಟು ವೇಗವಾಗಿ ಯಾವ ದೇಶಗಳು ಕೂಡ ಬೆಳವಣಿಗೆ ಕಂಡಿಲ್ಲ. ಭಾರತದ ಸ್ಥಾನ 142ರಿಂದ 100ಕ್ಕೆ ಜಿಗಿದಿದೆ, ಆದರೆ ಇದರಿಂದ ನಾವು ತೃಪ್ತರಾಗಿಲ್ಲ ಎಂದರು.
ನೋಟುಗಳ ಅನಾಣ್ಯೀಕರಣ ಕುರಿತು ಇಂದಿನ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, ಈ ಬಗ್ಗೆ ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸಿದೆ. ನೋಟುಗಳ ಅನಾಣ್ಯೀಕರಣದಿಂದ ತಮ್ಮ ನಿದ್ದೆಯನ್ನು ಕಳೆದುಕೊಂಡವರು ಮಾತ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ ಎಂದರು.
ನೋಟುಗಳ ಅನಾಣ್ಯೀಕರಣದ ಹಿಂದಿನ ಉದ್ದೇಶವನ್ನು ಭಾರತ ದೇಶದ ಬಡಜನತೆ ಅರ್ಥಮಾಡಿಕೊಂಡಿದ್ದಾರೆ. ಆದರೆ ಇದರಿಂದ ನಿದ್ದೆ ಕಳೆದುಕೊಂಡವರು ಎರಡು ವರ್ಷಗಳು ಕಳೆದ ನಂತರ ಇಂದಿಗೂ ಅಳುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಸೊರಗಿಹೋಗಿದ್ದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯನ್ನು ಕೂಡ ಸರ್ಕಾರ ವಾಸ್ತವಗೊಳಿಸಿದೆ ಎಂದರು.ಸದ್ಯಕ್ಕೆ ಇದರ ಲಾಭ ಕಂಡುಬರದಿದ್ದರೂ ಕೂಡ ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶಕ್ಕೆ ಇವೆರಡೂ ನಮ್ಮ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳು. 70 ವರ್ಷಗಳ ಹಳೆಯ ನಿಯಮಗಳನ್ನು ತಿದ್ದುಪಡಿ ಮಾಡುವಾಗ ಅಲ್ಲಿ ಕೆಲವು ತೊಂದರೆಗಳು, ನ್ಯೂನತೆಗಳು ಕಂಡುಬರುವುದು ಸಹಜ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಕಾಂಗ್ರೆಸ್ ನ್ನು ಟೀಕಿಸಿದರು.
ಭಾರತ ದೇಶ ಬದಲಾಗುತ್ತಿದೆ, ನಿಮ್ಮ ಎಲ್ಲಾ ಕನಸುಗಳನ್ನು ಈಡೇರಿಸುತ್ತೇವೆ, ಈ ನಂಬಿಕೆ ಮತ್ತು ಭರವಸೆಯನ್ನು ನಾನು ನಿಮಗೆ ನೀಡಬಲ್ಲೆ ಎಂದು ತಮ್ಮ ಭಾಷಣದ ಕೊನೆಯಲ್ಲಿ ಹೇಳಿದರು.
ಇದಕ್ಕೂ ಮುನ್ನ ಅವರು ವಹತ್ ಅಲ್ ಕರಮದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಹುತಾತ್ಮ ಯೋಧರ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com