ಇಸ್ಲಾಮಾಬಾದ್: ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರು ಕೆಲ ಸೂಕ್ಷ್ಮ ದಾಖಲೆಗಳೊಂದಿಗೆ ನಾಪತ್ತೆಯಾಗಿದ್ದಾರೆ.
ಪಾಕಿಸ್ತಾನ ಸೇನೆಯ ಅಧಿಕಾರಿ, ಸಾರಾ-ಇ-ಖಾರ್ಬೋಝಾ ನಿವಾಸಿಯೊಬ್ಬರನ್ನು ಆಸ್ಟ್ರಿಯಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕ್ಲರ್ಕ್ ಆಗಿ ನೇಮಕ ಮಾಡಲಾಗಿತ್ತು. ಅಲ್ಲದೆ ಆತನಿಗೆ ಪಾಕಿಸ್ತಾನ ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಒಂದು ಅತಿ ಸೂಕ್ಷ್ಮ ಕೆಲಸ ನೀಡಲಾಗಿತ್ತು ಎಂದು ಡಾನ್ ವರದಿ ಮಾಡಿದೆ.
ಪಾಕ್ ಸೇನೆಯ ಅಧಿಕಾರಿಗೆ ರಾಷ್ಟ್ರೀಯ ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಉಸ್ತುವಾರಿ ನೀಡಲಾಗಿತ್ತು. ಅದು ದೇಶದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಮಹತ್ವದ ಹುದ್ದೆ ಎಂದು ವರದಿ ವಿವರಿಸಿದೆ.
ಈ ಸಂಬಂಧ ಪಾಕಿಸ್ತಾನ ರಕ್ಷಣಾ ಸಚಿವಾಲಯ ಪಿಪಿಸಿ ಸೆಕ್ಷೆನ್ 109 ಮತ್ತು 409ರಡಿ ಪ್ರಕರಣ ದಾಖಲಿಸಿದೆ.
ಈ ಮಧ್ಯೆ, ತಮ್ಮ ಪತಿ ಪಾಕಿಸ್ತಾನ ರಾಯಭಾರಿ ಕಚೇರಿಯಿಂದ ಯಾವುದೇ ದಾಖಲೆ ತೆಗೆದುಕೊಂಡು ಹೋಗಿಲ್ಲ. ಆದರೆ ಐದು ವರ್ಷಗಳ ನಂತರ ಅವರು ವಾಪಸ್ ಬರಲಿದ್ದಾರೆ ಎಂದು ನಾಪತ್ತೆಯಾಗಿರುವ ಅಧಿಕಾರಿಯ ಪತ್ನಿ ಹೇಳಿದ್ದಾರೆ.