ಜಕಾರ್ತಾ(ಇಂಡೋನೇಷಿಯಾ): ಪ್ರಯಾಣಿಕರ ಹಡಗು ಮುಳುಗಿದ ಪರಿಣಾಮ 31 ಮಂದಿ ದಾರುಣ ಸಾವಿಗೀಡಾದ ಘಟನೆ ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ನಡೆದಿದೆ.
ಚಂಡಮಾರುತದ ಕಾರಣ ಹಡಗು ಮುಳುಗಲು ಪ್ರಾರಂಭಗೊಂಡ ತಕ್ಷಣ ಎಚ್ಚೆತ್ತುಕೊಂಡ ನಾವಿಕ ಸಮಯ ಪ್ರಜ್ಞೆ ಮೆರೆದಿದ್ದಾನೆ. ಆತ ಹಡಗನ್ನು ಹತ್ತಿರದ ದ್ವೀಪದತ್ತ ನಡೆಸಿದ್ದಾನೆ. ಇದರಿಂದ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದು ಹಲವು ಪ್ರಯಾಣಿಕರ ಜೀವ ಉಳಿದಿದೆ.
ಮುಳುಗಿದ ಹಡಗಿನಲ್ಲಿ ಸಿಬ್ಬಂದಿಯೂ ಸೇರಿ 164 ಮಂದಿ ಇದ್ದರು.ಎಂದು ರಾಷ್ಟ್ರೀಯ ರಕ್ಷಣಾ ಪಡೆ ಅಧಿಕಾರಿಗಳು ಹೇಳಿದ್ದಾರೆ. ಇದುವರೆಗೆ 130 ಮಂದಿಯನ್ನು ರಕ್ಷಿಸಲಾಗಿದ್ದು ಮೂವರು ನಾಪತ್ತೆಯಾಗಿದ್ದಾರೆ ಎಂದು ಇಂಡೋನೇಷಿಯಾ ಸಾರಿಗೆ ಸಚಿವಾಲಯ ಹೇಳಿದೆ.
ಮುಳುಗಿದ ಹಡಗಿನಲ್ಲಿ ಕೇವಲ ಪ್ರಯಾಣಿಕರಷ್ಟೇ ಅಲ್ಲದೆ 48 ವಾಹನಗಳೂ ಇದ್ದವು ಎನ್ನಲಾಗಿದ್ದು ದುರಂತದಲ್ಲಿ ಅಪಾರ ಪ್ರಮಾಣ ಸಂಪತ್ತು ಸಹ ನಷ್ಟವಾಗಿದೆ.
ಇಂಡೋನೇಷಿಯಾದಲ್ಲಿ ಈ ಒಂದು ತಿಂಗಳಿನಲ್ಲಿ ಸಂಭವಿಸಿದ ಎರಡನೇ ಹಡಗು ದುರಂತ ಇದಾಗಿದೆ. ಕಳೆದ ಎರಡು ವಾರಗಳ ಹಿಂದೆ ಸುಮಾತ್ರ ದ್ವೀಪದ ಬಳಿ ನಡೆದ ಹಡಗು ದುರಂತದಲ್ಲಿ 200ಕ್ಕೆ ಹೆಚ್ಚಿನ ಜನ ಸಾವನ್ನಪ್ಪಿದ್ದರು.